ಅವಕಾಶ ವಂಚಿತ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಲು ಪರಿಶೀಲಿಸಿ ಕ್ರಮ: ಸಿಎಂ ಬೊಮ್ಮಾಯಿ

Update: 2022-10-08 14:33 GMT

ಬೆಂಗಳೂರು, ಅ. 8: ‘ಅವಕಾಶ ವಂಚಿತ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಸ್ಸಿ-ಎಸ್ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನ ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು, ಇವರಿಗೆ ನ್ಯಾಯ ಒದಗಿಸಲು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಒಳಮೀಸಲಾತಿ ಬಗ್ಗೆ ಬಗ್ಗೆ ಅಧ್ಯಯನ ಮಾಡಿರುವ ನ್ಯಾ.ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು.

‘ಎಲ್ಲ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳ ಮೀಸಲಾತಿಯಿಂದ ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು.ಇನ್ನು ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದು ಅಧಿಕೃತವಾಗಿ ಚರ್ಚೆ ಮಾಡಿ ಕೈಗೊಂಡಿರುವ ತೀರ್ಮಾನ' ಎಂದು ಅವರು ತಿಳಿಸಿದರು. 

ಮೀಸಲಾತಿ ಪ್ರಮಾಣ ಹೆಚ್ಚಳ ನಿರ್ಣಯಕ್ಕೆ ಕಾನೂನಿನ ರಕ್ಷಣೆ ನೀಡಲು ಸಂವಿಧಾನದ ಪರಿಚ್ಛೇದ 9ಕ್ಕೆ ಸೇರಿಸಲು ವಿಧಿವಿಧಾನಗಳನ್ನು ಕಾನೂನು ಸಚಿವರು, ಕಾನೂನು ಆಯೋಗ ಮತ್ತು ಸಂವಿಧಾನದ ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಿ ಅನುಷ್ಠಾನ ಮಾಡುವ ತೀರ್ಮಾನ ಮಾಡಿದೆ. ಒಟ್ಟು ಮೀಸಲಾತಿ ಪ್ರಮಾಣ ಶೇ.50ರಷ್ಟು ದಾಟಿದ್ದು ಕಾನೂನು ರಕ್ಷಣೆ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳಿವೆ' ಎಂದರು.

‘ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಮೀಸಲಾತಿ ಹೆಚ್ಚಳ ನಿರ್ಣಯವನ್ನು ಪರಿಚ್ಛೇದ 9ರಲ್ಲಿ ರಕ್ಷಣೆ ಪಡೆಯಲು ಸಕಾರಣಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಲಿದೆ. ನಾವು ಎಸ್ಸಿ-ಎಸ್ಟಿಗಳಿಗೆ ನೀಡಿರುವ ಮೀಸಲಾತಿಯ ಹೆಚ್ಚಳ ರಕ್ಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಈಗಾಗಲೇ ಚರ್ಚೆಯಾಗಿದೆ. ಇನ್ನಷ್ಟು ಚರ್ಚಿಸಿ ಎಲ್ಲ್ಲ ವಿವರಗಳೊಂದಿಗೆ ಗೆಜೆಟ್ ಅಧಿಸೂಚನೆ ಹಾಗೂ ಪರಿಚ್ಛೇದ 9ರಲ್ಲಿ  ಸೇರಿಸಲು ಶಿಫಾರಸ್ಸು ಮಾಡಲಾಗುವುದು' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News