5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ | ಮಕ್ಕಳ ಮೇಲೆ ಒತ್ತಡ ಹೇರುತ್ತಿರುವ ರಾಜ್ಯ ಸರಕಾರ: ರೂಪ್ಸಾ

Update: 2022-10-08 14:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 8: ಶಿಕ್ಷಣ ಹಕ್ಕು ಕಾಯ್ದೆ(ಆರ್‍ಟಿಇ)ಯ ಷರತ್ತು 16 ರಲ್ಲಿ ತಿಳಿಸಿರುವಂತೆ 1 ರಿಂದ 8ನೆ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುವ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವ ಆಗಿಲ್ಲ. ಈ ನಿಟ್ಟಿನಲ್ಲಿ 5ನೆ ಮತ್ತು 8ನೆ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ನಿರ್ಧಾರದಿಂದ ಮಕ್ಕಳ ಮೇಲೆ ಒತ್ತಡ ಹೇರಿದಂತೆ ಆಗುತ್ತದೆ ಎಂದು ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಹಿಂದಿನಿಂದ ನಿರಂತರ ಮತ್ತು ಸಮಗ್ರ ಮೌಲ್ಯಾಂಕನ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಪ್ರತಿ ವರ್ಷವೂ 4 ಬಾರಿ ರೂಪಣಾತ್ಮಕ ಮೌಲ್ಯಾಂಕನ ಪರೀಕ್ಷೆಗಳು ಹಾಗೂ 2 ಬಾರಿ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಗಳನ್ನು ಹೀಗೆ ಒಟ್ಟು 6 ಬಾರಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಲ್ಲದೆ, ಬೋರ್ಡ್ ಪರೀಕ್ಷೆಯನ್ನು ಮಕ್ಕಳಿಗೆ ನಡೆಸಿದರೆ ಮಕ್ಕಳ ಮನಸ್ಸಿನಲ್ಲಿ ಬಾರಿ ಒತ್ತಡವನ್ನು ಉಂಟು ಮಾಡಿದಂತಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ತನ್ನ ವಾರ್ಷಿಕ ವರದಿಯಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿ ಓದುವಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕಳಪೆ ಆಗಿದೆ ಎಂಬ ಕಾರಣ ನೀಡಲಾಗಿದೆ. ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿ ಮಾಡಲು ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ದೊರೆಯುವಂತೆ ಆಗಲು ಪ್ರತ್ಯೇಕ ಲ್ಯಾಬ್‍ಗಳು, ಸುಸ್ಥಿರ ಹಾಗೂ ಆಕರ್ಷಕ ಕೊಠಡಿಗಳು, ಸಮಯದಲ್ಲಿ ಪುಸ್ತಕಗಳ ವಿತರಣೆ ಇತ್ಯಾದಿ ಪರಿಕರಗಳನ್ನು ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News