ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಹಾಫಿಝ್‍ಗಳಿಗೆ ಸನ್ಮಾನ

Update: 2022-10-08 14:53 GMT

ಬೆಂಗಳೂರು, ಅ.8: ಬೀದರ್ ಜಿಲ್ಲೆಯ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದು ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಹಾಫಿಝ್(ಕುರ್ ಆನ್ ಕಂಠಪಾಠ ಮಾಡಿದವರು) ವಿದ್ಯಾರ್ಥಿಗಳಿಗೆ ಅಮೆರಿಕಾದ ನಸೀಮ್ ಫೌಂಡೇಶನ್ ಹಾಗೂ ಬೆಂಗಳೂರಿನ ನಾಸಿಹ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ನಗರದ ಸೆಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷೆಯಲ್ಲಿ ಸರಕಾರಿ ವೈದ್ಯಕೀಯ ಸೀಟು ಪಡೆಯಲು ಅರ್ಹತೆ ಪಡೆದ ಹಾಫಿಝ್‍ಗಳಿಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೀದರ್ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ತಮ್ಮ ಮನೆಯ ಒಂದು ಚಿಕ್ಕ ಕೋಣೆಯಲ್ಲಿ 17 ಮಕ್ಕಳೊಂದಿಗೆ ಶಾಲೆ ಆರಂಭ ಮಾಡಿದೆ. ಇವತ್ತು ನಮ್ಮ ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದರು.

ಮದ್ರಸಾದ ವಿದ್ಯಾರ್ಥಿಗಳು, ಹಾಫಿಝ್‍ಗಳು ಹಾಗೂ ಶಾಲೆಯನ್ನು ಅರ್ಧಕ್ಕೆ ಬಿಟ್ಟಿರುವಂತಹ ಮಕ್ಕಳ ಮೇಲೆ ಹೆಚ್ಚು ಗಮನ ಇಟ್ಟು ನಾವು ಅವರಿಗೆ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಆಡಳಿತದ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದಂತಹ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈವರೆಗೆ ಸರಕಾರಿ ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ 12 ಹಾಫಿಝ್‍ಗಳು ಸರಕಾರಿ ವೈದ್ಯಕೀಯ ಸೀಟು ಪಡೆಯುವ ಮೂಲಕ ತಮ್ಮ ಸಾಮಥ್ರ್ಯ ಸಾಬೀತುಪಡಿಸಿದ್ದಾರೆ ಎಂದು ಅಬ್ದುಲ್ ಖದೀರ್ ಹೇಳಿದರು.

ಅಮೆರಿಕಾದ ನಸೀಮ್ ಫೌಂಡೇಶನ್ ಅಧ್ಯಕ್ಷ ಅಕ್ರಮ್ ಸೈಯ್ಯದ್, ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದಂತಹ ಹಾಫಿಝ್‍ಗಳಿಗೆ ಪುರಸ್ಕಾರದ ರೂಪದಲ್ಲಿ ಚೆಕ್ ಹಾಗೂ ಸ್ಮರಣಿಕೆಗಳನ್ನು ಪ್ರದಾನ ಮಾಡಿದರು. ಅಲ್ಲದೆ, ಶಾಹೀನ್ ಶಿಕ್ಷಣ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ನಾಸಿಹ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಉಪ ಕುಲಪತಿ ಫಾ.ವಿಕ್ಟರ್ ಲೋಬೋ, ಮುಫ್ತಿ ಮುಹಮ್ಮದ್ ಅಸ್ಲಮ್ ರಶಾದಿ ಖಾಸ್ಮಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News