×
Ad

ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಖಚಿತ: ಎಚ್.ಡಿ.ದೇವೇಗೌಡ

Update: 2022-10-08 20:55 IST

ಬೆಂಗಳೂರು, ಅ.8: ರಾಜ್ಯದ ನೆಲ, ಜಲದ ವಿಷಯದಲ್ಲಿ ಕೊನೆಯವರೆಗೂ ಅನ್ಯಾಯವಾಗಲು ಬಿಡುವುದಿಲ್ಲ. ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಶನಿವಾರ ನಗರದ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಜೆಡಿಎಸ್ ಜನತಾ ಮಿತ್ರ’ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ನಮ್ಮ ಪಕ್ಷವನ್ನು ಉಳಿಸಲು 10 ವರ್ಷಗಳಿಂದ ಯಾವ ಯಾವ ಕಾರ್ಯಕ್ರಮ ಮಾಡಿದ್ದಾರೆ ಎಂದು ಗೊತ್ತು. ಆದರೆ ಈಗ ಹಿಂದಿನ ವಿಚಾರಗಳನ್ನು ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ನನ್ನ ಆರೋಗ್ಯ ಇನ್ನು ಸ್ವಲ್ಪ ಚೇತರಿಸಿಕೊಳ್ಳ ಬೇಕು. ನಾವು ನೀವೆಲ್ಲರೂ ಸೇರಿ ಈ ಪಕ್ಷ ಉಳಿಸಬೇಕಿದೆ ಎಂದು ತಿಳಿಸಿದರು.

ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ. ಮುಸ್ಲಿಮ್ ಸಮುದಾಯಕ್ಕೆ ಶಕ್ತಿ ತುಂಬಿದ್ದು ಯಾರು? ಮೀಸಲಾತಿ ಕೊಟ್ಟವರು ಯಾರು? ವಸತಿ ಶಾಲೆಗಳನ್ನು ಕೊಟ್ಟವರು ಯಾರು? ಅನ್ನೋದನ್ನು ದಯವಿಟ್ಟು ನೆನಪಿಸಿಕೊಳ್ಳಬೇಕು ಎಂದು ದೇವೇಗೌಡ ತಮ್ಮ ಸರಕಾರದ ಸಾಧನೆಯನ್ನು ಮೆಲುಕು ಹಾಕಿದರು. 

ನಮ್ಮ ಪಕ್ಷದಿಂದ ಹೊರಗೆ ಹೋದವರು ತುಂಬಾ ಜನ ಇದ್ದಾರೆ. ನನ್ನ ಬಗ್ಗೆ ಯಾರು ಏನೇ ಮಾತನಾಡಿದರೂ ಪರವಾಗಿಲ್ಲ. ಈ ಪಕ್ಷ ಉಳಿಸಲು ನೀವು ಶಕ್ತಿ ಕೊಡಬೇಕು. ನನ್ನ ಕಣ್ಣ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಸತ್ಯ, ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಸತ್ಯ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ದೇವೇಗೌಡ ಹೇಳಿದರು.

ನಾನು ಮುಖ್ಯಮಂತ್ರಿ ಆಗುವಾಗಲು ಹೋರಾಟ ಆಯ್ತು, ನಾನು 90ರ ದಶಕದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ 16 ಲೋಕಸಭಾ ಸ್ಥಾನ ಬಂತು. ಇನ್ನೂ ಹೋರಾಟ ಮಾಡುವೆ ನಾವು ನೀವೆಲ್ಲರೂ ಸೇರಿ ಈ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಅವರು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬೆಂಗಳೂರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ತರಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಅಪೇಕ್ಷೆ. ಅದರಂತೆ ಜನತಾ ಜಲಧಾರೆ, ಜನತಾಮಿತ್ರ ಕಾರ್ಯಕ್ರಮ ರೂಪಿಸಲಾಗಿತ್ತು ಎಂದರು.

ಜನತಾ ಮಿತ್ರ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಒಂದು ಲಕ್ಷ ಮಂದಿ ಪತ್ರಗಳು, ಆನ್‍ಲೈನ್ ಮೂಲಕ ಸಮಸ್ಯೆಗಳು, ಪರಿಹಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು  ಕಳುಹಿಸಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾತ್ರ ಬೆಂಗಳೂರಿಗೆ ಶಾಶ್ವತ ಯೋಜನೆಗಳು ಆಗಿದ್ದವು ಎಂದು ಕುಮಾರಸ್ವಾಮಿ ಹೇಳಿದರು.

ದೇವೆಗೌಡರು ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿರುವ ಕೆರೆ ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದರು. ಆದರೆ ಇವತ್ತು ಅಭಿವೃದ್ಧಿ ನೆಪದಲ್ಲಿ ಕೆರೆಕಟ್ಟೆಗಳನ್ನ ರಾಷ್ಟ್ರೀಯ ಪಕ್ಷಗಳ ಆಡಳಿತ ಅವಧಿಯಲ್ಲಿ ಮುಚ್ಚಲಾಗಿದೆ. ಅದರ ಪರಿಣಾಮವೇ ಇಂದು ಬೆಂಗಳೂರಿನ ಅನೇಕ ಬಡಾವಣೆಗಳು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿ, ಅಲ್ಲಿನ ನಾಗರಿಕರು ಸಮಸ್ಯೆ ಎದುರಿಸುವಂತಾಯಿತು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. 

ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಸೇರಿದಂತೆ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News