ರಾಜಧಾನಿ ಬೆಂಗಳೂರಿನಲ್ಲಿ ಮೀಲಾದುನ್ನಬಿ ಆಚರಣೆ
ಬೆಂಗಳೂರು: ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ಅವರ ಜನ್ಮ ದಿನದ ಪ್ರಯುಕ್ತ ರಾಜಧಾನಿ ಬೆಂಗಳೂರಿನ ಎಲ್ಲೆಡೆ ಸಂಭ್ರಮ, ಸಡಗರದಿಂದ ಮೀಲಾದುನ್ನಬಿ ಆಚರಣೆ ಮಾಡಲಾಯಿತು.
ರವಿವಾರ ಇಲ್ಲಿನ ಆರ್‍ಟಿನಗರ, ಶಿವಾಜಿನಗರ, ಗೋರಪ್ಪನಪಾಳ್ಯ, ಬಿಟಿಎಂ, ತಿಲಕ್ ನಗರ, ಶಿವಾಜಿನಗರ, ಯಾರಬ್ ನಗರ, ಕಾವಲ್ ಭೈರಸಂದ್ರ, ಲಕ್ಕಸಂದ, ಜಯನಗರ, ವಿಜಯನಗರ, ಆರ್‍ಆರ್‍ನಗರ, ಜೆಪಿನಗರ, ಸೇರಿದಂತೆ ಎಲ್ಲೆಡೆ ಮುಸ್ಲಿಮರು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ಅವರ ಸಂದೇಶಗಳು, ಪವಿತ್ರ ಮಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಸಿದರು.
ನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ಜುಲೂಸೆ ಮುಹಮ್ಮದೀಯ ಸಮಿತಿ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮೀಲಾದುನ್ನಬಿ ಸಮಾರಂಭ ಆಯೋಜಿಸಲಾಗಿತ್ತು. ವಿವಿಧ ಭಾಗಗಳಿಂದ ಮುಸ್ಲಿಮರು ಪಾಲ್ಗೊಂಡು, ಮುಹಮ್ಮದ್(ಸ)ರ ಸಂದೇಶಗಳ ಮೂಲಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಿಗಿ ಬಂದೋಬಸ್ತ್: ಮೀಲಾದುನ್ನಬಿ ಸಂಭ್ರಮದ ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮಸೀದಿಗಳ ವ್ಯಾಪ್ತಿಯಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು.ಅದೇ ರೀತಿ, ಸಂಚಾರ ದಟ್ಟಣೆ ಸಮಸ್ಯೆ ಉಂಟಾಗದಂತೆಯೂ ವಿವಿಧ ಭಾಗಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ, ಕ್ರಮ ಕೈಗೊಳ್ಳಲಾಗಿತ್ತು.
ಕೋವಿಡ್ ಹಾವಳಿಯಿಂದಾಗಿ ಕಳೆದ ಮೂರು ವರ್ಷಗಳ ಬಳಿಕ ಮೀಲಾದುನ್ನಬಿ ಅದ್ಧೂರಿ ಆಚರಣೆ ನಡೆದಿದೆ.
ಸಸಿ ವಿತರಣೆ: ಮೀಲಾದುನ್ನಬಿ ಹಬ್ಬದ ಹಿನ್ನೆಲೆ ಎಸ್‍ಐಒ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನ ಈದ್ಗಾ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ಗಿಡ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.