BMTC ಬಸ್ ಹರಿದು ವಿದ್ಯಾರ್ಥಿನಿ ಗಂಭೀರ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಬಂಧನ

Update: 2022-10-10 15:26 GMT

ಬೆಂಗಳೂರು, ಅ. 10: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಹರಿದ ಪರಿಣಾಮ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ  ಬೆಂಗಳೂರು ವಿವಿಯ 20ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಬೆಳಗ್ಗೆ 11ಗಂಟೆಯ ಸುಮಾರಿಗೆ ಬಸ್ ಹತ್ತುವ ವೇಳೆ ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿನಿಯನ್ನು ಗಮನಿಸದೆ ಬಿಎಂಟಿಸಿ ಬಸ್ ಚಾಲಕ ಬಸ್ ಅನ್ನು ಮುಂದಕ್ಕೆ ಓಡಿಸಿದ್ದು ಇದರಿಂದ ವಿದ್ಯಾರ್ಥಿನಿ ಶಿಲ್ಪಾ ಎಂಬವರ ದೇಹದ ಸೊಂಟದ ಮೇಲೆ ಬಸ್ ಹರಿದಿದೆ. ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕೃತ್ಯಕ್ಕೆ ಕಾರಣವಾದ ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ವಾಹನ ಬಿಟ್ಟು ಪರಾರಿಯಾಗಿದ್ದು, ಕೂಡಲೇ ತಪ್ಪಿತಸ್ಥರ ಬಂಧನ ಮಾಡಬೇಕೆಂದು ಆಗ್ರಹಿಸಿ ಜ್ಞಾನಭಾರತಿ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೋಲಿಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ. ಈ ಪ್ರಕರಣ ಸಂಬಂಧ ಜ್ಞಾನ ಭಾರತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News