ಫಾತಿಮಾ ರಲಿಯಾರಿಗೆ 2022ನೇ ಸಾಲಿನ 'ಛಂದ ಪುಸ್ತಕ' ಬಹುಮಾನ

Update: 2022-10-11 05:33 GMT
ಫಾತಿಮಾ ರಲಿಯಾ

ಬೆಂಗಳೂರು, ಅ.10: ಛಂದ ಪುಸ್ತಕ ಪ್ರಕಾಶನ ಸಂಸ್ಥೆ ನೀಡುವ ಪ್ರಸಕ್ತ (2022) ಸಾಲಿನ 'ಛಂದ ಪುಸ್ತಕ ಬಹುಮಾನ'ಕ್ಕೆ ಹೆಜಮಾಡಿಯ ಫಾತಿಮಾ ರಲಿಯಾ ಆಯ್ಕೆಯಾಗಿದ್ದಾರೆ ಎಂದು ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ವಸುಧೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯು 40,000 ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

93 ಕತೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಛಂದ ಪುಸ್ತಕ ಹಸ್ತಪ್ರತಿಯ ತೀರ್ಪುಗಾರರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಮೂಲತಃ ದ.ಕ. ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿ ಪಡೆದಿರುವ ಇವರು, 'ಕಡಲು ನೋಡಲು ಹೋದವಳು' ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷ ಪ್ರಕಟಿಸಿದ್ದಾರೆ.

"ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಮ್ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್  ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವನ್ನು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಛಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ. ಕೇವಲ ಪರ-ವಿರೋಧಗಳ ಯಾವುದೋ ಧ್ರುವದಲ್ಲಿ ನಿಲ್ಲದೆ, ಹಲವು ಆಯಾಮಗಳಿಂದ ಬದುಕನ್ನು ನೋಡುವ ಒಳನೋಟ ಇವರಿಗೆ ದಕ್ಕಿದೆ. ಹಿಂದೂ-ಮುಸ್ಲಿಮ್ ಸಂಬಂಧಗಳ ಸಾಮರಸ್ಯಗಳನ್ನು ಚಿತ್ರಿಸುತ್ತಲೇ, ಕ್ಷುಲ್ಲಕ ಘಟನೆಗಳಿಂದಾಗಿ ಅವು ಸಿಡಿದು ಹೋಗುವ ಅಸಹಾಯಕ ಸನ್ನಿವೇಶಗಳನ್ನು ಇವರು ಚಿತ್ರಿಸುತ್ತಾರೆ. ವಸ್ತು ವಿವರಗಳಲ್ಲಿ ನಾವಿನ್ಯತೆಯನ್ನು ತೋರುವ ರಲಿಯಾ, ಬದುಕಿನ ಘಟನೆಗಳನ್ನು ಪ್ರತ್ಯಕ್ಷವಾಗಿ ತೋರಿಸುತ್ತಲೇ ಪರೋಕ್ಷವಾಗಿ ಅದರ ಇನ್ನೊಂದು ಮಗ್ಗುಲನ್ನು ದರ್ಶಿಸುವುದರಿಂದ ಕಥಾವಸ್ತು ಹೆಚ್ಚು ಸಾಂದ್ರವಾಗಿ ಓದುಗರ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.” ಎಂದು ರಲಿಯಾ ಅವರ ಕತೆಗಳ ಕುರಿತಂತೆ ತೀರ್ಪುಗಾರರಾದ ಗಿರೀಶ ಕಾಸರವಳ್ಳಿ ಟಿಪ್ಪಣಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News