ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು: ಎನ್.ಆರ್.ರಮೇಶ್
ಬೆಂಗಳೂರು, ಅ.12: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದ ಅವಧಿಯಲ್ಲಿ ಕಾನೂನು ನಿಯಮ ಉಲ್ಲಂಘಿಸಿ ರೀ-ನೋಟಿಫಿಕೇಷನ್ ಹೆಸರಿನಲ್ಲಿ ಬರೋಬ್ಬರಿ 200ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸರಕಾರಿ ಆಸ್ತಿಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಬುಧವಾರ ಬಹುಕೋಟಿ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಪ್ರಕರಣ ಸಂಬಂಧ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಕೂಡಲೇ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ಅಥವಾ ಸಿಐಡಿ ತನಿಖೆಗೆ ನೀಡಬೇಕೆಂದು ಆಗ್ರಹಿಸಿದರು.
ಬೆಂಗಳೂರಿನ ದಕ್ಷಿಣ ತಾಲೂಕು ವ್ಯಾಪ್ತಿಯ ಲಾಲ್‍ಬಾಗ್ ಸಿದ್ಧಾಪುರ ಗ್ರಾಮದ ಸರ್ವೆ ಸಂಖ್ಯೆ 27/1, 28/4, 28/5 ಮತ್ತು 28/6ರ ಎರಡು ಎಕರೆ 39 ಗುಂಟೆಯಷ್ಟು ಸ್ವತ್ತನ್ನು ಬಿಡಿಎ ಮಾಸ್ಟರ್ ಯೋಜನೆಯಂತೆ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗ ವೆಂದು ಮೀಸಲಿಡಲಾಗಿತ್ತು. ಇಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಯುವುದು ಕಾನೂನು ಬಾಹಿರ ಕಾರ್ಯವಾಗಿದ್ದು, ಇದರ ವ್ಯಾಪ್ತಿ ನರ್ಸರಿಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿತ್ತು.
ಆದರೆ, ಉದ್ಯಾನವನ ಮತ್ತು ಸಾರ್ವಜನಿಕರ ಬಳಕೆಗೆಂದು ಮೀಸಲಿಟ್ಟಿದ್ದ ಎರಡು ಎಕರೆ 39 ಗುಂಟೆ ಸ್ವತ್ತಿನ ಸಹಿತ ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್ ಕಾನೂನುಬಾಹಿರವಾಗಿ ಕ್ರಯಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದರು. ನಂತರ ಈ ಸ್ವತ್ತುಗಳಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಬಳಕೆಗೆ ಪರಿವರ್ತಿಸಿಕೊಡಬೇಕೆಂಬ ಮನವಿಯನ್ನು ರಾಜ್ಯ ಸರಕಾರದ ಸಮಿತಿಗೆ ಅಶೋಕ್ ಧಾರಿವಾಲ್ ಸಲ್ಲಿಸಿದಾಗ ಎರಡು ಬಾರಿ 2013ಕ್ಕೂ ಮೊದಲು ರಾಜ್ಯ ಸರಕಾರದ ಸಮಿತಿಯು ತಿರಸ್ಕರಿಸಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಸಹ ಸಾರ್ವಜನಿಕರ ಬಳಕೆಗೆ ಮೀಸಲಿಟ್ಟ ಜಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಲೀ ಅಥವಾ ನೀಡುವುದಾಗಲೀ ಮಾಡುವಂತಿಲ್ಲ ಎಂದು ಆದೇಶವನ್ನು ನೀಡಿದೆ. ಹೈಕೋರ್ಟ್ ಸಹ ಇದೇ ಸ್ವತ್ತಿಗೆ ಸಂಬಂಧಿಸಿದಂತೆ ತನ್ನಲ್ಲಿ ದಾಖಲಾದ ಪ್ರಕರಣಕ್ಕೆ ಉದ್ಯಾನವನಗಳು ಮತ್ತು ಸಾರ್ವಜನಿಕ ಬಳಕೆಗೆಂದು ಮೀಸಲಿಟ್ಟ ಸ್ಥಳಗಳನ್ನು ಡಿ ನೋಟಿಫೇ ಮಾಡುವ ಮುನ್ನ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಮುಂದೆ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಬೇಕೆಂದು ಸ್ಪಷ್ಟವಾಗಿ ಆದೇಶಿಸಿತ್ತು.
ಆದರೆ, ಆಗ ತಾನೇ ರಚನೆಯಾಗಿದ್ದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಬಿಎಂಪಿಸಿಯ ಒಂದು ಬಾರಿಯೂ ಸಭೆಯನ್ನು ಸೇರದೆ, ಹೈಕೋರ್ಟ್ ಆದೇಶದಂತೆ ಬಿಎಂಪಿಸಿಯ ಮುಂದೆ ಮಂಡಿಸಿ, ಸಮಿತಿಯ ಎಲ್ಲ ಸದಸ್ಯರಿಂದ ಒಪ್ಪಿಗೆಯ ನಿರ್ಣಯಕ್ಕೆ ಸಹಿ ಹಾಕಿಸಿಕೊಂಡ ನಂತರ ಡಿ ನೋಟಿಫೇ ಮಾಡಬೇಕಿತ್ತು. ಹೀಗಿದ್ದರೂ ಸಹ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 2014ನೇ ಸಾಲಿನಲ್ಲಿ ಸಿದ್ಧಾಪುರ ಬಡಾವಣೆಯ, ಕನಿಷ್ಟ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 1,30,680 ಚ.ಅಡಿಗಳಷ್ಟು ವಿಸ್ತೀರ್ಣದ ಜಾಗವನ್ನು ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್‍ನ ಪ್ರಭಾವಕ್ಕೆ ಮಣಿದು ಡಿನೋಟಿಫೇ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಕಾನೂನು ಪದವೀಧರರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅತ್ಯಂತ ಚಾಣಾಕ್ಷತನದಿಂದ ಡಿನೋಟಿಫೇ ಬದಲಾಗಿ ‘ರೀ-ನೋಟಿಫೇ’ ಎಂಬ ಪದವನ್ನು ಬಳಸಿ ಈ ಕಾನೂನು ಬಾಹಿರ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ ಎಂದು ಅವರು ಆಪಾದಿಸಿದರು.
ಹಾಗಾಗಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿ ಅಂದಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾಗಿದ್ದ ಶ್ಯಾಮ್ ಭಟ್ ಮತ್ತು ಅಶೋಕ್ ಧಾರಿವಾಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಮತ್ತು ಸರಕಾರಿ ಭೂ ಕಬಳಿಕೆ ಸಂಚು ಪ್ರಕರಣಗಳನ್ನು ದಾಖಲಿಸಿಕೊಂಡು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.