ಮಾಜಿ ಶಾಸಕ ಆರ್.ವಿ. ದೇವರಾಜ್ ತಂಡದಿಂದ ಕಿರುಕುಳ: ಕೆಜಿಎಫ್ ಬಾಬು ಆರೋಪ
ಬೆಂಗಳೂರು, ಅ.13: ಚಿಕ್ಕಪೇಟೆ ಕ್ಷೇತ್ರದ ಸ್ಲಂ ನಿವಾಸಿಗಳಿಗೆ 350ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, 180 ಕೋಟಿ ರೂ. ವೆಚ್ಚದಲ್ಲಿ 3ಸಾವಿರ ಮನೆಗಳನ್ನು ನಿರ್ಮಿಸಿಕೊಡುತ್ತಿದ್ದೇನೆ. ನನ್ನ ವಿರುದ್ಧ ಮಾಜಿ ಶಾಸಕ ಆರ್.ವಿ.ದೇವರಾಜ್, ಅವರ ಪುತ್ರ ಯುವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಉಮ್ರಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆಜಿಎಫ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಪೇಟೆ ಕ್ಷೇತ್ರದಲ್ಲಿರುವ ಸ್ಲಂಗಳಲ್ಲಿನ ಪ್ರತಿ ಕುಟುಂಬಕ್ಕೆ ಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‍ಶಿಪ್ ರೂಪದಲ್ಲಿ ತಲಾ 5 ಸಾವಿರ ರೂ.ಗಳಂತೆ ಚೆಕ್ ವಿತರಣೆ ಮಾಡುತ್ತಿದ್ದೇನೆ. 50 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ ಎಂದರು.
ದೇವರಾಜ್ ಮತ್ತು ಅವರ ತಂಡದವರು ನನ್ನ ಸಮಾಜ ಸೇವಾ ಕಾರ್ಯಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ನಾನು 12.37 ಕೋಟಿ ರೂ.ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೇನೆ. ನಾನು ಯಾವುದೇ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಲ್ಲ. ಸರಕಾರ ವಶಪಡಿಸಿಕೊಂಡು ಹರಾಜು ಹಾಕಿರುವ ಆಸ್ತಿಗಳನ್ನು ನಾನು ಖರೀದಿಸಿರುವುದು ಎಂದು ಬಾಬು ಹೇಳಿದರು.
ಬಡವರಿಗೆ ಮನೆ ಕಟ್ಟಿಸಿಕೊಡಲು ಸರಕಾರ ಅನುಮತಿ ನೀಡಿ, ಅವರಿಗೆ ದಾಖಲಾತಿ, ಹಕ್ಕುಪತ್ರ ನೀಡಲಿ ಸಾಕು. ನಾನೇ ದುಡ್ಡು ಹಾಕಿ ಮನೆ ಕಟ್ಟಿಸಿಕೊಡುತ್ತೇನೆ, ಅವರ ತೆರಿಗೆಯನ್ನು ಪಾವತಿಸುತ್ತೇನೆ. ನಾನು ಯಾವುದೇ ಪಕ್ಷ, ವ್ಯಕ್ತಿಯನ್ನು ದೂರಲು ಬಂದಿಲ್ಲ, ಬಡವರ ಮೇಲಿನ ಕಾಳಜಿಗಾಗಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಬಾಬು ತಿಳಿಸಿದರು.