×
Ad

AICC ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಗೆ ಮತ ನೀಡುವಂತೆ ಕಾಂಗ್ರೆಸ್ ನಾಯಕರ ಮನವಿ

Update: 2022-10-14 20:45 IST

ಬೆಂಗಳೂರು, ಅ.14: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ನೀಡಬೇಕೆಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದರು.

ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ನಮ್ಮ ರಾಜ್ಯದವರೇ ಆದ ಮುತ್ಸದ್ಧಿ ರಾಜಕಾರಣಿ ಎಂ.ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ನಿಷ್ಠಾವಂತ ಹಿರಿಯ ಕಾಂಗ್ರೆಸ್ ನಾಯಕ ಖರ್ಗೆ ಅವರು ಸಮರ್ಥ ಆಡಳಿತಗಾರರಾಗಿದ್ದಾರೆ ಎಂದರು.

ತಮಗೆ ವಹಿಸಿದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಇಂತಹ ಮುತ್ಸದ್ದಿ ರಾಜಕಾರಣಿ ಮತ್ತು ಅನುಭವಿ ಆಡಳಿತಗಾರರಾದ ನಮ್ಮವರೇ ಅದ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ಮತವನ್ನು ಕೊಡಿ ಎಂದು ಮನವಿ ಮಾಡಿದರು.

ಶಾಸಕ ಭೈರತಿ ಸುರೇಶ್ ಮಾತನಾಡಿ, ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೇ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿ. ಖರ್ಗೆ ಅವರನ್ನು ನಾವು ಹೊಗಳಬೇಕಿಲ್ಲ, ಅವರದ್ದು ದೊಡ್ಡ ವ್ಯಕ್ತಿತ್ವ. ನಿಷ್ಠಾವಂತ ನಾಯಕರು. ಖರ್ಗೆ ಅವರಿಗೆ ಮತ ಹಾಕುತ್ತೇವೆ ಎನ್ನುವುದೇ ಒಂದು ಹೆಮ್ಮೆಯ ವಿಷಯ ಎಂದು ಹೇಳಿದರು.

ಶಾಸಕ ಎ.ಎನ್.ಹಾರೀಸ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಜಾತ್ಯತೀತ, ಸಮರ್ಥ ನಾಯಕ. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವವರು. ಅವರಿಗೆ ಮತ ಹಾಕಲು ನಮಗೆ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, ಎಐಸಿಸಿಗೆ ಐದನೆ ಬಾರಿ ಚುನಾವಣೆ ನಡೆಯುತ್ತಿದೆ. ಕರ್ನಾಟಕಕ್ಕೆ ಇದೊಂದು ಅದೃಷ್ಟ. ಕೆಳಮಟ್ಟದಿಂದ ಬಂದು ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದವರು ಮಲ್ಲಿಕಾರ್ಜುನ ಖರ್ಗೆ ಅವರು. ಅವರಿಗೆ ಮತ ನೀಡುವುದೇ ಸಂತಸದ ಕ್ಷಣ ಎಂದರು.

► ಅ.17ಕ್ಕೆ ಚುನಾವಣೆ

ಅ.17ರಂದು ಈ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕದ ಪ್ರತಿನಿಧಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಯನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ತೆರೆಯಲಾಗುತ್ತಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ವಿ.ಆರ್.ಸುದರ್ಶನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News