×
Ad

ಭಾರತ್ ಜೋಡೊ ಯಾತ್ರೆ: ಶನಿವಾರ ಬಳ್ಳಾರಿಯಲ್ಲಿ ಬೃಹತ್ ಬಹಿರಂಗ ಸಭೆ

Update: 2022-10-14 23:37 IST

ಬಳ್ಳಾರಿ, ಅ.14: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯು ಶನಿವಾರ(ಅ.15) ಬಳ್ಳಾರಿ ನಗರ ಪ್ರವೇಶಿಸಲಿದ್ದು, ಇಲ್ಲಿನ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ.

ಪ್ರಧಾನ ವೇದಿಕೆ ಸೇರಿದಂತೆ ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಮಧ್ಯದ ವೇದಿಕೆಯಲ್ಲಿ ರಾಹುಲ್ ಗಾಂಧಿ ಜೊತೆ 60 ಜನ ಪ್ರಮುಖ ನಾಯಕರು ಆಸೀನರಾಗಲಿದ್ದಾರೆ. ಎರಡು ಬದಿಯಲ್ಲಿ ತಲಾ 150 ಮುಖಂಡರು ಕೂರುವಂತೆ ವೇದಿಕೆಗಳನ್ನು ನಿರ್ಮಿಸಲಾಗಿದೆ.

ವೇದಿಕೆಯ ಮುಂಭಾಗದಲ್ಲಿ ಸುಮಾರು 80 ಸಾವಿರ ಜನರು ಕೂರಲು ವ್ಯವಸ್ಥೆ ಮಾಡಲಾಗಿದೆ. ಪ್ರಧಾನ ವೇದಿಕೆಯಲ್ಲಿ ರಾಹುಲ್ ಗಾಂಧಿ ಜೊತೆ ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‍ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಇನ್ನಿತರ ಮುಖಂಡರು ಆಸೀನರಾಗಲಿದ್ದಾರೆ.

ಈ ಸಭೆಯಲ್ಲಿ ಸುಮಾರು 3 ರಿಂದ 4 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ. ರಾಹುಲ್ ಗಾಂಧಿ ಅವರನ್ನು 108 ಮಹಿಳೆಯರು ಪೂರ್ಣಕುಂಭ ಹೊತ್ತು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ. ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು, ಪಾದಯಾತ್ರಿಗಳು ಹಾಗೂ ಮುಖಂಡರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದ್ದಾರೆ.

ಅ.15ರಂದು ಬೆಳಗ್ಗೆ 6.30ಕ್ಕೆ ಹಲಕುಂದಿಯಿಂದ ಪಾದಯಾತ್ರೆ ಆರಂಭವಾಗಿ ಬಳ್ಳಾರಿಗೆ ಆಗಮಿಸಲಿದೆ. ಬೆಳಗ್ಗೆ 11 ಗಂಟೆಗೆ ಕಮ್ಮಾಭವನದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ಕ್ಕೆ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಸಭೆ ಆರಂಭವಾಗಲಿದೆ. ಆನಂತರ, ಸಂಗನಕಲ್ ಗ್ರಾಮಕ್ಕೆ ತೆರಳಲಿರುವ ರಾಹುಲ್ ಗಾಂಧಿ ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News