‘ಭಾರತ್ ಫೈಬರ್ ಟು ಹೋಂ’ ಜಾಲ ವಿಸ್ತರಣೆಗೆ ಆದ್ಯತೆ: ರವಿ ಜಿ.ಆರ್.

Update: 2022-10-15 09:51 GMT

ಮಂಗಳೂರು, ಅ.15: ಬಿಎಸ್‌ಎನ್‌ಎಲ್ ದ.ಕ ದೂರಸಂಪರ್ಕ ಜಿಲ್ಲಾ ವ್ಯಾಪ್ತಿಯಲ್ಲಿ ‘ಭಾರತ್ ಫೈಬರ್ ಟು ಹೋಂ’ ಜಾಲದ ವಿಸ್ತರಣೆ ಹಾಗೂ ಜಿಲ್ಲೆಯಾದ್ಯಂತ 4ಜಿ ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದು ಬಿಎಸ್‌ಎನ್‌ಎಲ್ ಮಂಗಳೂರು ಮುಖ್ಯ ಮಹಾಪ್ರಬಂಧಕ ರವಿ ಜಿ.ಆರ್.ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಂಗಳೂರು ನಗರದಲ್ಲಿ ಮಾತ್ರವೇ ಬಿಎಸ್‌ಎನ್‌ಎಲ್ 4ಜಿ ಸೇವೆ ಇದೆ, ಉಳಿದ ಕಡೆ 2ಜಿ, 3ಜಿ ಮಾತ್ರ ಇದೆ, ಮುಂದಿನ 18 ತಿಂಗಳ ಅವಧಿಯಲ್ಲಿ 4ಜಿ ಸೇವೆಯನ್ನು ಜಿಲ್ಲೆಯ ಎಲ್ಲಾ ಭಾಗಗಳಿಗೂ ವಿಸ್ತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ, ಅದಕ್ಕೆ ಪೂರಕವಾಗಿ ಸರಕಾರದಿಂದ ಅಗತ್ಯವಿರುವ ಯಂತ್ರೋಪಕರಣ, ಬಿಡಿಭಾಗ ಇತ್ಯಾದಿ ಬರುವ ನಿರೀಕ್ಷೆ ಇದೆ ಎಂದರು.

ಪ್ರಸ್ತುತ ದ.ಕ, ಉಡುಪಿ ಜಿಲ್ಲೆ ಸೇರಿದಂತೆ 7 ಲಕ್ಷ ಮೊಬೈಲ್ ಗ್ರಾಹಕರಿದ್ದಾರೆ, ಸಂಖ್ಯೆ ತುಸು ಕುಸಿತವಾಗಿರುವುದು ನಿಜ. ಖಾಸಗಿ ಟೆಲಿಕಾಂಗಳು 5ಜಿಯತ್ತ ಗಮನ ಹರಿಸಿರುವಾಗ ಬಿಎಸ್‌ಎನ್‌ಎಲ್ ಇನ್ನೂ 4ಜಿ ವಿಸ್ತರಣೆಯಲ್ಲಿದೆ. ಕೆಲ ಕಾಲ ಹಿನ್ನಡೆಯಾಗಿತ್ತು, ಆದರೆ ಮುಂದೆ ಕೇಂದ್ರ ಸರಕಾರ ಬಿಎಸ್‌ಎನ್‌ಎಲ್ ಉತ್ತೇಜನಾ ಪ್ಯಾಕೇಜ್ ಜಾರಿಗೊಳಿಸಿರುವುದರಿಂದ ಕೆಲ ತಿಂಗಳಲ್ಲಿ ಉತ್ತಮ ಸೇವೆ ನಿರೀಕ್ಷಿಸಬಹುದು ಎಂದರು.

► ಫೈಬರ್ ಬ್ರಾಡ್‌ಬ್ಯಾಂಡ್

ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಗ್ರಾಹಕರಿಗೆ ಭಾರತ್ ಫೈಬರ್ ಮೂಲಕ ಗುಣಮಟ್ಟದ ಇಂಟರ್‌ನೆಟ್ ಸೇವೆ ಒದಗಿಸಲು ಹಾಗೂ ಉತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಫ್ರಾಂಚೈಸಿ ಪಾಲುದಾರರನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದೆ. ಆಸಕ್ತರು ಬಿಎಸ್‌ಎನ್‌ಎಲ್ ಮಂಗಳೂರು ಪಾಂಡೇಶ್ವರ ಕಚೇರಿಯ ಮಾರ್ಕೆಟಿಂಗ್ ವಿಭಾಗವನ್ನು ಸಂಪರ್ಕಿಸಬಹುದು. ಈಗಾಗಲೇ ದ.ಕ, ಉಡುಪಿ ಜಿಲ್ಲೆಯಲ್ಲಿ 18 ಸಾವಿರ ಮಂದಿ ಫೈಬರ್  ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡಿದ್ದಾರೆ. ಕೇಂದ್ರ ಸರಕಾರದ ಸೂಚನೆಯಂತೆ ಭಾರತ್ ನೆಟ್ ಉದ್ಯಮಿ ಯೋಜನೆ ಪರಿಚಯಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆದಾರರಾಗಲು ಅವಕಾಶವಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವೇಗದ ಇಂಟರ್‌ನೆಟ್ ಪಡೆಯಲು ಭಾರತ್ ಏರ್ ಫೈಬರ್ ಸೇವೆ ಲಭ್ಯವಿದೆ. ಪ್ರಸ್ತುತ 17 ಕಡೆಗಳಲ್ಲಿ ಇದು ಸಿಗುತ್ತಿದೆ, ತಾಮ್ರದ ವೈರಿನ ಸಾಂಪ್ರದಾಯಿಕ ಬ್ರಾಡ್‌ಬ್ಯಾಂಡ್ ಬದಲು ಅತಿ ವೇಗದ ಫೈಬರ್ ಸೇವೆಗೆ ಬದಲಾಯಿಸಿಕೊಳ್ಳುವುದಕ್ಕೂ ಗ್ರಾಹಕರಿಗೆ ಉತ್ತಮ ಕೊಡುಗೆಗಳು ಲಭ್ಯವಿವೆ ಎಂದು ರವಿ ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News