ಮಂಗಳೂರು: ಅ.18ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ
ಮಂಗಳೂರು, ಅ.15: ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನಲ್ಲಿ ಅ.18ರಂದು ಬೆಳಗ್ಗೆ 9ರಿಂದ ಸಂಜೆ 3.30ರ ವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಯಾವುದೇ ನೋಂದಣಿ ಶುಲ್ಕವಿಲ್ಲದೆ ಅಭ್ಯರ್ಥಿಗಳು ಭಾಗವಹಿಸುವ ಅವಕಾಶವಿದೆ ಎಂದು ಪ್ರಾಂಶುಪಾಲ ರೆ.ಫಾ. ಮೈಕೆಲ್ ಸಾಂತುಮಯೋರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಕೈಗಾರಿಕೆಗಳ ಒಕ್ಕೂಟ ಮಾಜಿ ಅಧ್ಯಕ್ಷ ಜೀವನ್ ಸಲ್ಡಾನಾ ಉದ್ಘಾಟಿಸುವರು. ಕಾಲೇಜಿನ ಸಂಚಾಲಕ ರೆ.ಫಾ. ಬೊನವೆಂಚರ್ ನಝರತ್ ಅಧ್ಯಕ್ಷತೆ ವಹಿಸಲಿದ್ದು, ಪಿಟಿಎ ಅಧ್ಯಕ್ಷೆ ಪ್ಯಾಸ್ಟಿ ವಾಸ್ ಮತ್ತು ಎಂಐಸಿಎಎ ಅಧ್ಯಕ್ಷೆ ರೈನಾ ಡಿಕುನ್ಹಾ ಉಪಸ್ಥಿತರಿರುವರು ಎಂದು ತಿಳಿಸಿದರು.
ಅರ್ಥಶಾಸ ವಿಭಾಗ ಉಪನ್ಯಾಸಕ ಡೆನ್ಸಿಲ್ ಪಿಂಟೋ ಮಾತನಾಡಿ, ಉದ್ಯೋಗ ಮೇಳದಲ್ಲಿ ಮಂಗಳೂರು, ಬೆಂಗಳೂರು, ಮುಂಬೈ, ಗೋವಾ ಹಾಗೂ ಕೇರಳದ ಐಟಿ, ಬಿಪಿಒ, ಇನ್ಶೂರೆನ್ಸ್, ಬ್ಯಾಂಕಿಂಗ್, ಆರೋಗ್ಯ, ಹೋಟೆಲ್, ಆಟೋಮೊಬೈಲ್, ಕ್ರೂಸ್, ಶಿಕ್ಷಣ, ಟೆಲಿಕಮ್ಯುನಿಕೇಷನ್ಸ್, ಸೇಲ್ಸ್ ಮತ್ತು ರಿಟೇಲ್ ನಂತಹ 60 ಕಂಪೆನಿಗಳು ಭಾಗವಹಿಸಲಿದ್ದು, 2,500ರಷ್ಟು ಉದ್ಯೋಗಾವಕಾಶ ಒದಗಿಸಲಿವೆ. ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಐಟಿಐ, ಡಿಪ್ಲೊಮಾ, ಕ್ರೂಸ್ ಹಾಗೂ ಹೊಟೇಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆದ ಅಭ್ಯರ್ಥಿಗಳು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು. ಸ್ವವಿವರದ ಪ್ರತಿಗಳು ಹಾಗೂ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಬಹುದು ಎಂದು ವಿವರಿಸಿದರು.
ಪ್ಲೇಸ್‌ಮೆಂಟ್ ಅಧಿಕಾರಿ ಅದಿರಾ ಉಪಸ್ಥಿತರಿದ್ದರು.