×
Ad

VIDEO- ವಿಧಾನ ಸೌಧದಲ್ಲಿ ಕಬ್ಬಿನ ದರ ನಿಗದಿ ಸಭೆ; ಕೋಡಿಹಳ್ಳಿ ಚಂದ್ರಶೇಖರ್ ಹಾಜರಿಗೆ ರೈತ ಮುಖಂಡರ ಆಕ್ಷೇಪ

Update: 2022-10-15 18:17 IST

ಬೆಂಗಳೂರು, ಅ. 15:ಕಬ್ಬು ದರ ನಿಗದಿಗೆ ಸಂಬಂಧ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಜರಿದ್ದಕ್ಕೆ ರೈತ ಸಂಘದ ಮತ್ತೊಂದು ಬಣ ಆಕ್ಷೇಪಿಸಿದ್ದರಿಂದ ಸಭೆಯಲ್ಲಿ ಕೆಲ ಕಾಲ ಮುಖಂಡರ ಮಧ್ಯೆ ಪರಸ್ಪರ ವಾಗ್ವಾದ ಮತ್ತು ಗದ್ದಲಕ್ಕೆ ಕಾರಣವಾಯಿತು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ರೈತ ಮುಖಂಡರೊಬ್ಬರು, ‘ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಗುರುತರವಾದ ಆರೋಪಗಳಿವೆ. ಅವರಿಂದಾಗಿ ರೈತ ಮುಖಂಡರನ್ನು ಅನುಮಾನದಿಂದ ನೋಡುವ ಸನ್ನಿವೇಶ ನಿರ್ಮಾಣವಾಗಿದೆ. ಆದುದರಿಂದ ಅವರನ್ನು ಹೊರಗಿಟ್ಟು ಸಭೆ ನಡೆಸಬೇಕು. ಇಲ್ಲವಾದರೆ ನಾವು ಸಭೆಯಿಂದ ಹೊರ ಹೋಗುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ‘ಕಬ್ಬು ಬೆಲೆ ನಿಗದಿಗೆ ಸಭೆ ಕರೆದಿದ್ದು, ಇಲ್ಲಿ ವೈಯಕ್ತಿಕ ಆರೋಪ ಸರಿಯಲ್ಲ. ನನ್ನ ವಿರುದ್ಧದ ಆರೋಪಗಳು ಸಾಬೀತಾದರೆ ಯಾವುದೇ ರೀತಿಯ ಶಿಕ್ಷೆ ಅನುಭವಿಸಲು ನಾನು ಸಿದ್ಧ. ಈಗಾಗಲೇ ನಾನು ಸಿಎಂ ಪತ್ರ ನೀಡಿದ್ದೇನೆ. ವೈಯಕ್ತಿಕ ಆರೋಪ ಎಳೆದು ತಂದು ಸಭೆಗೆ ಅಡ್ಡಿಪಡಿಸಬಾರದು' ಎಂದು ಕೋರಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪವೂ ನಡೆಯಿತು. ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲಿಗರು, ಇನ್ನೊಂದು ಗುಂಪಿನ ರೈತ ಮುಖಂಡರ ವಿರುದ್ಧ ವಾಗ್ದಾಳಿ ಆರಂಭಿಸಿತು. ಇದರಿಂದ ಸಭೆಯಲ್ಲಿ ತೀವ್ರ ವಾಗ್ವಾದ ನಡೆಸಿತು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಚಿವ ಶಂಕರ್ ಪಾಟೀಲ್, ‘ಸಭೆ ಕಬ್ಬು ಬೆಲೆ ನಿಗದಿಗೆ ಆಹ್ವಾನಿಸಲಾಗಿದೆ. ಹೀಗಾಗಿ ಇಲ್ಲಿ ಬೇರೆ ವಿಚಾರ ಚರ್ಚೆ ಬೇಡ. ಸಭೆ ನಡೆಸಲು ಅನುವು ಮಾಡಿಕೊಡಬೇಕು' ಎಂದು ಮನವಿ ಮಾಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದರೈತ ನಾಯಕಿ ಸುನಂದಾ ಜಯರಾಮ್, ‘ಕಬ್ಬು ದರ ನಿಗದಿ ಮತ್ತು ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸರಕಾರ ಸಭೆಯನು ಕರೆದಿದ್ದು, ಅದೇ ಸಭೆಯ ಕಾರ್ಯಸೂಚಿ. ಹೀಗಾಗಿ ಆ ಕುರಿತು ಮೊದಲು ಚರ್ಚೆ ನಡೆಯಲಿ. ಉಳಿದ ವಿಷಯವನ್ನು ರೈತ ಸಂಘದ ಮುಖಂಡರು ಸೇರಿ ಚರ್ಚೆ ಮಾಡೋಣ' ಎಂದು ಸಲಹೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು. ಆ ಬಳಿಕ ಕಬ್ಬು ದರ ನಿಗದಿ ಸಂಬಂಧ ಸಭೆ ಮುಂದುವರಿಸಲಾಯಿತು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News