ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ-ಚೆನ್ನಯರ ನಾಮಫಲಕ-ಪ್ರತಿಮೆ ಅನಾವರಣ: ಶಾಸಕ ಸಂಜೀವ ಮಠಂದೂರು
ಪುತ್ತೂರು : ತುಳುನಾಡಿನ ವೀರ ಪುರುಷರೂ, ದೈವಾಂಶ ಪುರುಷರಾಗಿ ಆರಾಧಿಸಲ್ಪಡುವ ಜತೆಗೆ ನಾಡಿಗೆ ಹೊಸ ಸಂದೇಶ ನೀಡಿರುವ ಕೋಟಿ-ಚೆನ್ನಯರ ಹೆಸರನ್ನು ಶಾಶ್ವತವಾಗಿ ನೆನಪಿಸುವ ನಿಟ್ಟಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ-ಚೆನ್ನಯ ನಾಮಫಲಕ ಅಳವಡಿಸಿ, ಕೋಟಿ-ಚೆನ್ನಯರ ಪ್ರತಿಮೆಗಳನ್ನು ಅನಾವರಣ ಮಾಡುವ ಕಾರ್ಯ ಶೀಘ್ರದಲ್ಲೇ ಸರ್ಕಾರದ ವತಿಯಿಂದ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಅವರು ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಪಡುಮಲೆ ಮತ್ತು ಗೆಜ್ಜೆಗಿರಿ ಕ್ಷೇತ್ರದವರು ಈ ಕುರಿತು ಮನವಿ ಮಾಡಿಕೊಂಡಿದ್ದರು. ನಗರಸಭೆಯ ಅಧ್ಯಕ್ಷರು ಕೌನ್ಸಿಲ್ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು. ಜಿಲ್ಲಾಧಿಕಾರಿಗಳು ಪೌರಾಡಳಿತ ಇಲಾಖೆಗೆ ಕಳುಸಿದ್ದು, ಸಚಿವ ಶ್ರೀರಾಮುಲು ಅವರು ಈ ವಿಶೇಷ ಆದೇಶ ಮಾಡಿಸಿದ್ದಾರೆ. ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಜಯಕರ ಶೆಟ್ಟಿ ಅವರು ಮುತುವರ್ಜಿ ವಹಿಸಿದ್ದರು. ಸಂಸದ ನಳಿನ್‍ಕುಮಾರ್, ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಈ ಎಲ್ಲರ ಪ್ರಯತ್ನದ ಫಲವಾಗಿ ಸರ್ಕಾರದಿಂದ ಈ ಕೆಲಸ ಆಗಿದೆ. ಮಂಗಳೂರಿನ ವಿಮಾನ ನಿಲ್ದಾಣಕ್ಕೂ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಆ ಕೆಲಸವೂ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಕೆಲವೇ ದಿನಗಳಲ್ಲಿ ದಿನ ನಿಗದಿ ಪಡಿಸಿ ಸಚಿವರಾದ ಶ್ರೀರಾಮುಲು, ಸುನಿಲ್‍ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸಂಸದ ನಳಿನ್‍ಕುಮಾರ್ ಕಟೀಲು ಅವರನ್ನು ಬರಮಾಡಿಕೊಂಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ `ಕೋಟಿ-ಚೆನ್ನಯ' ನಾಪಫಲಕ ಅಳವಡಿಸುವ, ಪ್ರತಿಮೆ ಅನಾವರಣ ಮಾಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ನಗರಸಭೆಯ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಉಪಾಧ್ಯಕ್ಷ ಜಯರಾಮ ಪೂಜಾರಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಬಿಜೆಪಿ ಮುಖಂಡ ಸುನಿಲ್ ದಡ್ಡು ಮತ್ತಿತರರು ಉಪಸ್ಥಿತರಿದ್ದರು.
ಶಾಸಕರಿಗೆ ಬಿಲ್ಲವ ಸಮಾಜದ ಅಭಿನಂದನೆ
ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವಲ್ಲಿ ಶ್ರಮಿಸಿದ ಶಾಸಕ ಸಂಜೀವ ಮಠಂದೂರು ಅವರಿಗೆ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಜಯಂತ ನಡುಬೈಲು ಅವರು ಶಾಲು ಹೊದಿಸಿ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ಬಿಲ್ಲವ ಸಂಘದ ಪ್ರಮುಖರಾದ ಶಶಿಧರ್ ಕಿನ್ನಿಮಜಲು, ನಾರಾಯಣ ಪೂಜಾರಿ ಕುರಿಕ್ಕಾರ, ಚಂದ್ರಕಾಂತ ಶಾಂತಿವನ, ಬಾಬು ಪೂಜಾರಿ ಇಡ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರು ಇರಿಸಲು ಕಾರಣಕರ್ತರಾದ ಶಾಸಕ ಸಂಜೀವ ಮಠಂದೂರು ಅವರನ್ನು ಬಿಲ್ಲವ ಸಮಾಜದಿಂದ ಅಭಿನಂದಿಸಲಾಯಿತು.
ಪುತ್ತೂರು ಪ್ರವಾಸಿ ಮಂದಿರದಲ್ಲಿ ಶಾಸಕರನ್ನು ಭೇಟಿ ಮಾಡಿದ ಸಮಾಜದ ಮುಖಂಡರು ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಗೆಜ್ಜೆಗಿರಿ ಮೂಲಸ್ಥಾನ ಕ್ಷೇತ್ರದ ಗೌರವಾಧ್ಯಕ್ಷರೂ, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರೂ ಆದ ಜಯಂತ ನಡುಬೈಲ್ ಮಾತನಾಡಿ, ಮೂರು ವರ್ಷಗಳ ಹಿಂದೆ ಪುತ್ತೂರು ಬಿಲ್ಲವ ಸಂಘ ಮತ್ತು ಪುತ್ತೂರು ಯುವವಾಹಿನಿ ಘಟಕದ ವತಿಯಿಂದ ಶಾಸಕರನ್ನು ಭೇಟಿ ಮಾಡಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವಂತೆ ಮನವಿ ಮಾಡಿದ್ದೆವು. ಈ ಮನವಿಯನ್ನು ಸ್ವೀಕರಿಸಿದ ಶಾಸಕರು ಗಂಭೀರ ಪ್ರಯತ್ನ ಮಾಡಿ ಅದು ಸರಕಾರದಿಂದ ಮಂಜೂರಾಗುವವರೆಗೂ ಬೆನ್ನು ಬಿಡದೆ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಇಡೀ ಬಿಲ್ಲವ ಸಮಾಜದ ಪರವಾಗಿ ಶಾಸಕರನ್ನು ಅಭಿನಂದಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಸಿ. ನಾರಾಯಣ ರೆಂಜ, ಶಶಿಧರ ಕಿನ್ನಿಮಜಲ್, ಚಂದ್ರಕಾಂತ್ ಶಾಂತಿವನ, ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಪೂಜಾರಿ ಕುರಿಕ್ಕಾರ, ಬಾಬು ಪೂಜಾರಿ ಇದ್ಪಾಡಿ, ಜಯರಾಮ ಪೂಜಾರಿ ಒತ್ತೆಮುಂಡೂರು, ಸುನಿಲ್ ದಡ್ಡು ಮತ್ತಿತರರು ಉಪಸ್ಥಿತರಿದ್ದರು.