×
Ad

ಪುಣ್ಯಕೋಟಿ ಯೋಜನೆಗೆ ವೇತನ ಕಡಿತ: ನೌಕರರ ವಿರೋಧ, ಸಿಎಂ ಬೊಮ್ಮಾಯಿಗೆ ಪತ್ರ

Update: 2022-10-15 20:44 IST

ಬೆಂಗಳೂರು, ಅ. 15 : ಪುಣ್ಯಕೋಟಿ ದತ್ತು ಯೋಜನೆಗೆ ನೌಕರರ ವೇತನದಲ್ಲಿ ಕಟಾವಣೆ ಮಾಡಲು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟವು ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಪತ್ರವನ್ನು ಬರೆದಿದೆ.

ನೌಕರರು ತಮ್ಮ ಸಂಬಳದಿಂದ ವೇತನ ಕಡಿತ ಮಾಡಲು ಬಟವಾಡೆ ಅಧಿಕಾರಿಗಳಿಗೆ ಒಪ್ಪಿಗೆ ಪತ್ರ ನೀಡಿದರೆ, ಕಟಾವಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಒಪ್ಪಿಗೆ ಇಲ್ಲದ ನೌಕರರ ಸಂಬಳದಲ್ಲಿ ಯಾವುದೇ ಕಾರಣಕ್ಕೂ ಕಟಾವಣೆ ಮಾಡಬಾರದು ಎಂದು ಒಕ್ಕೂಟವು ತಿಳಿಸಿದೆ.

ಪುಣ್ಯಕೋಟಿ ಯೋಜನೆಗೆ ರಾಜ್ಯ ಸರಕಾರಿ ನೌಕರರೂ ಕೈ ಜೋಡಿಸುವಂತೆ ಮುಖ್ಯಮಂತ್ರಿಗಳು ಕೇಳಿದ್ದ ಹಿನ್ನೆಲೆಯಲ್ಲಿ ನೌಕರರ ಸಂಘದ ಅಧ್ಯಕ್ಷರು ರಾಜ್ಯದ ಸರಕಾರಿ ನೌಕರರ ಒಂದು ದಿನದ ವೇತನ 100ಕೋಟಿ ರೂ.ಗಳನ್ನು ನವೆಂಬರ್ ತಿಂಗಳ ವೇತನದಲ್ಲಿ ಕಟಾವಣೆ ಮಾಡಲು ಅನುಮತಿ ಪತ್ರ ಕೊಟ್ಟಿರುತ್ತಾರೆ. ಸಂಘದ ಈ ನಿರ್ಧಾರವನ್ನು ಒಕ್ಕೂಟವು ತಿರಸ್ಕರಿಸಿದೆ.

ಇತ್ತೀಚಿಗೆ ಕೃಷಿ ಬಿಕ್ಕಟ್ಟು ಉಲ್ಬಣವಾಗಿರುವುದರಿಂದ ಗ್ರಾಮೀಣ ಯುವಕರು ನಗರದೆಡೆಗೆ ವಲಸೆ ಹೊರಡುತ್ತಿರುವುದು ವಾಸ್ತವ ಸಂಗತಿಯಾಗಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಬೆಂಬಲ ವ್ಯವಸ್ಥೆ ಒದಗಿಸುವುದು, ಸೇರಿದಂತೆ ಕೃಷಿಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು. ಆಗ ಜಾನುವಾರುಗಳಿಗೂ ರಕ್ಷಣೆ ದೊರೆಯುತ್ತದೆ. ಹಸುಗಳನ್ನು ಕಸಾಯಿಖಾನೆಗೆ ಅಟ್ಟುವುದೂ ತಪ್ಪುತ್ತದೆ. ಕೃಷಿಯಲ್ಲಿ ಬಳಸುವ ಯಾವುದೇ ಜಾನುವಾರುಗಳನ್ನು ಕೃಷಿಕರಿಂದ ಹೊರತುಪಡಿಸಿ ರಕ್ಷಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇತ್ತೀಚಿಗೆ ರಾಜ್ಯದ ಉಚ್ಛ ನ್ಯಾಯಾಲಯವು ಗೋ ಶಾಲೆಗಳಿಗೆ ಸಂಬಂಧಿಸಿದಂತೆ ಅರ್ಜಿಯೊಂದರ ವಿಚಾರಣೆ ನಡೆಸಿ ಸರಕಾರವು ಘೋಷಣೆ ಮಾಡಿದ ಸ್ಥಳಗಳಲ್ಲಿ ಗೋ ಶಾಲೆಗಳೇ ಇಲ್ಲ ಎನ್ನುವುದನ್ನು ಖಾತರಿ ಮಾಡಿಕೊಂಡು ರಾಜ್ಯ ಸರಕಾರಕ್ಕೆ ತಿಳಿಸಿರುವುದು  ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ ಎಂದು ಒಕ್ಕೂಟವು ನೆನಪಿಸಿದೆ.

ಈ ಹಿಂದೆ ಅತಿವೃಷ್ಟಿ-ಅನಾವೃಷ್ಟಿಗಳಂತಹ ಸಂದರ್ಭಗಳಲ್ಲಿ, ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡುವ ಮೂಲಕ ರಾಜ್ಯ ಸರಕಾರಕ್ಕೆ ಜೊತೆಯಾಗಿದ್ದೇವೆ. ಕರೋನ ಸಂದರ್ಭದಲ್ಲಿ ರಾಜ್ಯದ ಸರಕಾರಿ ನೌಕರರಿಗೆ ಕೊಡಬೇಕಾದ 18 ತಿಂಗಳ ತುಟ್ಟಿಭತ್ಯೆ ಮೊತ್ತ ಒಟ್ಟು ರೂ. 4,500 ಕೋಟಿಯನ್ನು ತಡೆಹಿಡಿದಿರುವ ಸರಕಾರ ಈವರೆಗೂ ಅದನ್ನು ನೌಕರರಿಗೆ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

ಶಿಕ್ಷಣ, ಆರೋಗ್ಯ, ಸಾರಿಗೆ, ದೈನಂದಿನ ಸರಕು, ಪೆಟ್ರೋಲ್, ಇತ್ಯಾದಿ ವಸ್ತುಗಳ ಬೆಲೆಯೇರಿಕೆಯಿಂದ ಮಧ್ಯಮವರ್ಗದ ನೌಕರರ ಜೀವನ ಹೈರಾಣಾಗಿದೆ. ರಾಜ್ಯದ ನೌಕರರಿಗೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಶೇ.40-50 ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರ ನೌಕರರಿಗೆ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಸೌಲಭ್ಯಗಳನ್ನು ಸಕಾಲಕ್ಕೆ ಕೊಟ್ಟರೆ ಅವರು ನೆಮ್ಮದಿಯಿಂದ ಬದುಕಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

‘ಪಶುಸಂಗೋಪನೆಗೆ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆ ಖಾಲಿ ಬಿದ್ದಿವೆ.  ವೈದ್ಯರಿಲ್ಲದೆ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ, ಹಸುಗಳು ಕಾಲುಬಾಯಿ ರೋಗ ಬಂದು ಸಾಯುತ್ತಿವೆ. ಇರುವ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. ಖಾಲಿ ಹುದ್ದೆ ಭರ್ತಿ ಮಾಡುವ ಬದಲು ಇರುವ ನೌಕರರ ಸಂಬಳದಲ್ಲಿ ಹಸುಗಳ ಪೋಷಣೆಗೆ ವೇತನ ಕೇಳುವುದು ಯಾವ ನ್ಯಾಯ? ಒಟ್ಟಾರೆ ಪಶುಸಂಗೋಪನೆಗೆ ಒತ್ತು ಕೊಡದೇ ಕೇವಲ ಹಸುಗಳಿಗೆ ಮಾತ್ರ ಏಕೆ ಈ ಒತ್ತು? ಇದು ಸರಕಾರದ ತಾರತಮ್ಯ ನೀತಿಯಲ್ಲವೆ? ಕೆಲವರಿಗೆ  ಹಸು ದೈವವಾದರೆ, ಕೆಲವರಿಗೆ ಕೋಣ ದೈವವಾಗಿದೆ. ಹೀಗಿರುವಾಗ ಹಸುಗಳನ್ನು ಮಾತ್ರವೇ ಅದೂ ನೌಕರರ ವೇತನದ ಹಣದಲ್ಲಿ ವೈಭವೀಕರಿಸುವುದು ಎಷ್ಟರಮಟ್ಟಿಗೆ ಸರಿ?'

-ಎಚ್.ಎಸ್.ಜೈಕುಮಾರ್, ರಾಜ್ಯ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News