×
Ad

ರಾಜೇಂದ್ರ ಪಾಲ್ ರನ್ನು ಖಳನಾಯಕನಂತೆ ಬಿಂಬಿಸಲು ‘ಮಾಧ್ಯಮ’ಗಳ ಯತ್ನ: ಅಂಬೇಡ್ಕರ್‌ ವಾದಿ ಸಂಘಟನೆಗಳ ಖಂಡನೆ

Update: 2022-10-15 22:37 IST
Twitter/@AdvRajendraPal.

ಹೊಸದಿಲ್ಲಿ, ಅ. 15:  ಸಾವಿರಾರು ಜನರು ಬೌದ್ಧ ಧರ್ಮ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಪಕ್ಷ (ಆಪ್)ದ ನಾಯಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ಖಳನಾಯಕನಂತೆ ಬಿಂಬಿಸುವ   ಪ್ರಯತ್ನವನ್ನು ಹಲವು ಅಂತರರಾಷ್ಟ್ರೀಯ ಅಂಬೇಡ್ಕರವಾದಿ ಸಂಘಟನೆಗಳು ಖಂಡಿಸಿವೆ.

ಗೌತಮ್ ಹಾಗೂ ಸಾವಿರಾರು ಜನರು ಬೌದ್ಧ ಧರ್ಮ ಸ್ವೀಕರಿಸಿದ ಸಂದರ್ಭ ಡಾ. ಬಿ.ಆರ್. ಅಂಬೇಡ್ಕರ್ ಅವರ ರಚಿಸಿದ 22 ಪ್ರಮಾಣ ವಚನಗಳನ್ನು ಸ್ವೀಕರಿಸಿದ್ದರು. ಈ ಬಗ್ಗೆ  ಗೌತಮ್ ಅವರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ದಿಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ಜನರು ಬೌದ್ಧ ಧರ್ಮ ಸ್ವೀಕರಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 22 ಪ್ರಮಾಣ ವಚನಗಳನ್ನು ಸ್ವೀಕರಿಸುವುದು ಸಾಮಾನ್ಯ ಸಂಪ್ರದಾಯ ಎಂದು ಅಮೆರಿಕ, ಕೆನಡ, ಬ್ರಿಟನ್ ಹಾಗೂ ಇತರ ರಾಷ್ಟ್ರಗಳಲ್ಲಿರುವ ಹಲವು ಅಂಬೇಡ್ಕರ್‌ವಾದಿ ಸಂಘಟನೆಗಳು ಹೇಳಿಕೆಯಲ್ಲಿ ತಿಳಿಸಿವೆ.

ವ್ಯಕ್ತಿಯೋರ್ವ ಮೂಡನಂಬಿಕೆಯಿಂದ ದೂರ ಇರುವುದು, ಜಾತಿ ಪದ್ಧತೆಯಲ್ಲಿ ನಂಬಿಕೆ ಇರಿಸದೇ ಇರುವುದು ಹಾಗೂ ಪ್ರತಿಯೊಬ್ಬರಿಗೂ ಗೌರವ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಈ ಪ್ರಮಾಣ ವಚನ ಒಳಗೊಂಡಿವೆ.  ಈ ೨೨ ಪ್ರಮಾಣ ವಚನಗಳು ಯಾವುದೇ ಸಮುದಾಯಕ್ಕೆ ಅಗೌರವ ಉಂಟು ಮಾಡುವುದಿಲ್ಲ. ಆದುದರಿಂದ ಈ ಪ್ರಮಾಣ ವಚನಗಳ ಬಗ್ಗೆ ಮುಖ್ಯ ವಾಹಿನಿಯ ಮಾಧ್ಯಮಗಳು ನಕಾರಾತ್ಮಕ ಪ್ರಚಾರ ನಡೆಸುತ್ತಿರುವುದನ್ನು ನಾವು ಖಂಡಿಸುತ್ತವೆ ಎಂದು ಸಂಘಟನೆಗಳು ತಿಳಿಸಿವೆ.

ಕೆಲವು ಪ್ರಮಾಣ ವಚನಗಳನ್ನು ಸನ್ನಿವೇಶದಿಂದ ಬೇರ್ಪಡಿಸಿ ಗೌತಮ್ ಅವರ ಗೌರವಕ್ಕೆ ಧಕ್ಕೆ ತರುವ, ಅವರನ್ನು ಖಳನಾಯಕನಂತೆ ಬಿಂಬಿಸುವ, ತಪ್ಪಾಗಿ ಚಿತ್ರಿಸುವ ಹಾಗೂ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳನ್ನು ಕಾರ್ಯ ವೈಖರಿಯನ್ನು ನಾವು ಖಂಡಿಸುತ್ತೇವೆ ಎಂದು ಸಂಘಟನೆಗಳು ಹೇಳಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News