ರೇಡಿಯೊ ಪ್ರಸಾರಕ್ಕೆ ನೂರರ ಸಂಭ್ರಮ

Update: 2022-10-15 18:43 GMT

ಭಾಗ-1

ಬೆಂಗಳೂರಿನಂತಹ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಕಾರಿನಲ್ಲಿ ಸಂಚರಿಸುತ್ತಲೇ ರೇಡಿಯೊ ಕೇಳುವ ಮಜಾನೇ ಬೇರೆ. ಟ್ರಾಫಿಕ್ ಕಿರಿಕ್‌ನ ನಡುವೆಯೂ ಎಂಜಾಯ್ ಮಾಡಬಹುದಾದ ಏಕೈಕ ಸಾಧನ ಎಂದರೆ ರೇಡಿಯೊ. ನಾವಿದ್ದಲ್ಲೇ ನಮ್ಮ ಕೆಲಸ ಮಾಡುತ್ತಲೇ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೇಳುತ್ತಾ ಕಾಲ ಕಳೆಯಲು ರೇಡಿಯೊ ಒಂದು ಅದ್ಭುತ ಸಾಧನ. ಇಂತಹ ಅದ್ಭುತ ಸಾಧನದ ಪ್ರಸಾರಕ್ಕೆ ಈಗ ನೂರರ ಹರೆಯ. ಆಧುನಿಕ ಜಗತ್ತಿನಲ್ಲಿ ರೇಡಿಯೊಗಳು ಕಾರು ಮತ್ತು ಇನ್ನಿತರ ವಾಹನಗಳಲ್ಲಿ ಬಳಸುವ ಸಾಮಾನ್ಯವಾಗಿ ತಂತ್ರಜ್ಞಾನಧಾರಿತ ಸಾಧನವಾಗಿದೆ. ಆದರೆ ಶತಮಾನಗಳ ಹಿಂದೆ ಅದು ಕೆಲವೇ ಕೆಲವು ಮನೆಗಳಲ್ಲಿ ಬಳಸುತ್ತಿದ್ದ ಪ್ರತಿಷ್ಠೆಯ ಸಾಧನವಾಗಿತ್ತು. ಶತಮಾನಗಳ ಹಿಂದೆ ರೇಡಿಯೊ ಇದ್ದವರು ತುಂಬಾ ಸ್ಥಿತಿವಂತರು ಮತ್ತು ಐಶಾರಾಮಿ ಜೀವನ ನಡೆಸುವವರು ಎಂಬ ಹೆಗ್ಗಳಿಕೆ ಇತ್ತು. ನಂತರ ಕೆಲವೇ ವರ್ಷಗಳಲ್ಲಿ ಮನೆಮನೆಗಳಲ್ಲೂ ಸ್ಥಾನ ಗಿಟ್ಟಿಸಿಕೊಂಡಿತು. ಒಂದು ಕಾಲದಲ್ಲಿ ರೇಡಿಯೊ ಎಷ್ಟು ಜನಪ್ರಿಯವಾಗಿತ್ತೆಂದರೆ ಅದು ಇಲ್ಲದೆ ಜೀವನವೇ ಇಲ್ಲವೇನೋ ಎಂಬಂತಾಗಿತ್ತು. ತಾವಿರುವ ಸ್ಥಳದಲ್ಲಿ ಸದಾ ಕಾಲವೂ ರೇಡಿಯೊ ಕೇಳುವ ಹವ್ಯಾಸ ಜನರಲ್ಲಿ ಬಲವಾಗಿ ಬೇರೂರಿತ್ತು. ಇದಕ್ಕೆಲ್ಲಾ ಕಾರಣ ಏನೆಂದರೆ 1920ರ ನಂತರ ಜನಪ್ರಿಯವಾದ ರೇಡಿಯೊ ಪ್ರಸಾರ.

19 ನೇ ಶತಮಾನದ ಮೊದಲು, ದೈನಂದಿನ ಜೀವನದಲ್ಲಿ ವೈರ್‌ಲೆಸ್ ರೇಡಿಯೊ ಸಂವಹನವು ಫ್ಯಾಂಟಸಿಯ ವಿಷಯವಾಗಿತ್ತು. 1800ರ ದಶಕದ ಉತ್ತರಾರ್ಧದಲ್ಲಿ ರೇಡಿಯೊದ ಅಭಿವೃದ್ಧಿಯ ನಂತರವೂ, ರೇಡಿಯೊಗಳು ಮುಖ್ಯವಾಹಿನಿಗೆ ಹೋಗಲು ಹಲವು ವರ್ಷಗಳ ಕಾಲ ಬೇಕಾಯಿತು. ಆನಂತರ ಅದು ಮನೆಮನೆಯ ಸಾಧನವಾಯಿತು. ರೇಡಿಯೊದ ಇತಿಹಾಸ ತುಂಬಾ ಆಕರ್ಷಕವಾದದ್ದು. ಅದು ದೂರದಲ್ಲಿದ್ದ ಪ್ರಪಂಚದ ಜನರನ್ನು ಹತ್ತಿರಕ್ಕೆ ತಂದಿತ್ತು. ದೂರದ ಜನರನ್ನು ಹತ್ತಿರಕ್ಕೆ ಸಂಪರ್ಕಿಸಿದ ಮಾರ್ಗ ಬಹು ಅನನ್ಯವಾದದ್ದು.

ರೇಡಿಯೊ ಸುದೀರ್ಘ ಮತ್ತು ಆಸಕ್ತಿದಾಯಕ ಇತಿಹಾಸವನ್ನು ಹೊಂದಿದ್ದರೂ, ಅದರ ಆರಂಭ ಮಾತ್ರ ಇನ್ನೂ ಸಾಕಷ್ಟು ವಿವಾದಾತ್ಮಕವಾಗಿವೆ. ನಿಜವಾಗಿ ರೇಡಿಯೊವನ್ನು ಕಂಡುಹಿಡಿದವರು ಯಾರು? ಎಂಬ ಬಗ್ಗೆ ಕೆಲವು ಚರ್ಚೆಗಳಿವೆ. ಮೊದಲ ರೇಡಿಯೊ ಸಾಧನವನ್ನು ಯಾರು ಒಟ್ಟುಗೂಡಿಸಿದರು ಎಂದು ನಮಗೆ ಖಚಿತವಾಗಿ ತಿಳಿದಿಲ್ಲ. ಆದಾಗ್ಯೂ 1893ರಲ್ಲಿ ಆವಿಷ್ಕಾರಕ ನಿಕೊಲಾಯ್ ಟೆಸ್ಲಾ ಮಿಸೌರಿಯ ಸೈಂಟ್ ಲೂಯಿಸ್‌ನಲ್ಲಿ ವೈರ್‌ಲೆಸ್ ರೇಡಿಯೊವನ್ನು ಪ್ರದರ್ಶಿಸಿದರು ಎಂದು ನಮಗೆ ತಿಳಿದಿದೆ. ಈ ಪ್ರದರ್ಶನದ ಹೊರತಾಗಿಯೂ, ಗುಗ್ಲಿಯೆಲ್ಮೊ ಮಾರ್ಕೋನಿ ಅವರು ರೇಡಿಯೊದ ತಂದೆ ಮತ್ತು ಸಂಶೋಧಕ ಎಂದು ಹೆಚ್ಚಾಗಿ ಮನ್ನಣೆ ಪಡೆದಿದ್ದಾರೆ. 1896ರಲ್ಲಿ ಇಂಗ್ಲೆಂಡ್‌ನಲ್ಲಿ ಮೊತ್ತ ಮೊದಲ ವೈರ್‌ಲೆಸ್ ಟೆಲಿಗ್ರಾಫಿ ಪೇಟೆಂಟ್ ಅನ್ನು ಮಾರ್ಕೋನಿ ಅವರಿಗೆ ನೀಡಲಾಯಿತು. ಆ ಮೂಲಕ ಅವರು ರೇಡಿಯೊ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಒಂದು ವರ್ಷದ ನಂತರ ಟೆಸ್ಲಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ಮೂಲ ರೇಡಿಯೊಗಾಗಿ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದರು. ಮಾರ್ಕೋನಿಯ ಪೇಟೆಂಟ್ ನೀಡಿದ ನಾಲ್ಕು ಪೂರ್ಣ ವರ್ಷಗಳ ನಂತರ 1900ರಲ್ಲಿ ಅವರ ಪೇಟೆಂಟ್ ವಿನಂತಿಯನ್ನು ನೀಡಲಾಯಿತು. 1943ರಲ್ಲಿ ಟೆಸ್ಲಾ ಪರವಾಗಿ ಮಾರ್ಕೋನಿಯ ಪೇಟೆಂಟ್ ಅನ್ನು ರದ್ದುಗೊಳಿಸಿತು. 1920ರ ದಶಕದ ಮೊದಲು, ರೇಡಿಯೊವನ್ನು ಪ್ರಾಥಮಿಕವಾಗಿ ಸಮುದ್ರದಲ್ಲಿನ ಹಡಗುಗಳನ್ನು ಸಂಪರ್ಕಿಸಲು ಬಳಸಲಾಗುತ್ತಿತ್ತು. ಆಗ ರೇಡಿಯೊ ಸಂವಹನಗಳು ಹೆಚ್ಚು ಸ್ಪಷ್ಟವಾಗಿರಲಿಲ್ಲ. ಆದ್ದರಿಂದ ನಿರ್ವಾಹಕರು ಸಾಮಾನ್ಯವಾಗಿ ಮೋರ್ಸ್ ಕೋಡ್ ಸಂದೇಶಗಳ ಬಳಕೆಯನ್ನು ಅವಲಂಬಿಸಿದ್ದರು. ರೇಡಿಯೊಗೆ ಸ್ಪಷ್ಟ ರೂಪು ನೀಡಿದ ನಂತರ ಇದು ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ನೀರಿನಲ್ಲಿ ಹಡಗುಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿತು. ಮೊದಲನೆಯ ಮಹಾಯುದ್ಧದೊಂದಿಗೆ, ರೇಡಿಯೊದ ಪ್ರಾಮುಖ್ಯತೆಯು ಸ್ಪಷ್ಟವಾಯಿತು ಮತ್ತು ಅದರ ಉಪಯುಕ್ತತೆಯು ಗಮನಾರ್ಹವಾಗಿ ಹೆಚ್ಚಾಯಿತು. ಯುದ್ಧದ ಸಮಯದಲ್ಲಿ ಮಿಲಿಟರಿ ಇದನ್ನು ಬಹುತೇಕ ಪ್ರತ್ಯೇಕವಾಗಿ ಬಳಸಿತು ಮತ್ತು ಭೌತಿಕ ಸಂದೇಶವಾಹಕ ಅಗತ್ಯವಿಲ್ಲದೆ ನೈಜ ಸಮಯದಲ್ಲಿ ಸಶಸ್ತ್ರ ಪಡೆಗಳಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಇದು ಅಮೂಲ್ಯವಾದ ಸಾಧನವಾಯಿತು.

1920ರ ದಶಕದಲ್ಲಿ, ಯುದ್ಧದ ನಂತರ, ಯು.ಎಸ್. ಮತ್ತು ಯುರೋಪ್‌ನಾದ್ಯಂತ ನಾಗರಿಕರು ಖಾಸಗಿ ಬಳಕೆಗಾಗಿ ರೇಡಿಯೊಗಳನ್ನು ಖರೀದಿಸಲು ಪ್ರಾರಂಭಿಸಿದರು. ಪಿಟ್ಸ್‌ಬರ್ಗ್‌ನ ಪೆನ್ಸಿಲ್ವೇನಿಯಾದಲಿನ ಕೆ.ಡಿ.ಕೆ.ಎ. ಮತ್ತು ಇಂಗ್ಲೆಂಡ್‌ನ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪೆನಿಯಂತಹ ಪ್ರಸಾರ ಕೇಂದ್ರಗಳು ಹೊರಹೊಮ್ಮಲು ಪ್ರಾರಂಭಿಸಿದವು. 1920ರಲ್ಲಿ ವೆಸ್ಟಿಂಗ್‌ಹೌಸ್ ಕಂಪೆನಿಯು ಕೆ.ಡಿ.ಕೆ.ಎ. ವಾಣಿಜ್ಯ ರೇಡಿಯೊ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿತು ಮತ್ತು ಸ್ವೀಕರಿಸಿತು. ನಂತರ ಕೆ.ಡಿ.ಕೆ.ಎ. ಅಧಿಕೃತವಾಗಿ ಸರಕಾರದಿಂದ ಪರವಾನಿಗೆ ಪಡೆದ ಮೊದಲ ವಾಣಿಜ್ಯ ರೇಡಿಯೊ ಕೇಂದ್ರವಾಯಿತು. ಸಾರ್ವಜನಿಕರಿಗೆ ರೇಡಿಯೊ ಮೂಲಕ ವ್ಯಾಪಾರದ ಜಾಹೀರಾತುಗಳನ್ನು ಪ್ರಾರಂಭಿಸಿತು. ರೇಡಿಯೊ ಪ್ರಸಾರ ವಾಣಿಜ್ಯೀಕರಣಗೊಂಡ ನಂತರವೇ ಬಹುತೇಕ ರಾಷ್ಟ್ರಗಳ ಮನೆಮನೆಗಳಲ್ಲಿ ರೇಡಿಯೊ ಖಾಯಂ ಸ್ಥಾನ ಪಡೆದುಕೊಂಡಿತು. 1922ರಲ್ಲಿ ಬ್ರಿಟನ್‌ನ ಲಂಡನ್‌ನಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ(ಬಿ.ಬಿ.ಸಿ)ಯೊಂದಿಗೆ ರೇಡಿಯೊ ಪ್ರಸಾರಗಳು ಪ್ರಾರಂಭವಾದವು. ಪ್ರಸಾರಗಳು ತ್ವರಿತವಾಗಿ ಬ್ರಿಟನ್‌ನಾದ್ಯಂತ ಹರಡಿತು. 1926ರವರೆಗೆ ಪತ್ರಿಕೆಗಳು ಮುಷ್ಕರ ಹೂಡಿದ್ದವು. ಈ ಹಂತದಲ್ಲಿ ರೇಡಿಯೊ ಸಾರ್ವಜನಿಕರಿಗೆ ಮಾಹಿತಿಯ ಪ್ರಮುಖ ಮೂಲವಾಯಿತು.

ಅಮೆರಿಕ ಮತ್ತು ಬ್ರಿಟನ್ ಎರಡರಲ್ಲೂ ರೇಡಿಯೊ ಮನರಂಜನೆಯ ಮೂಲವಾಯಿತು. ಅನೇಕ ಮನೆಗಳಲ್ಲಿ ಇಡೀ ಕುಟುಂಬದ ಸದಸ್ಯರು ರೇಡಿಯೊದ ಮುಂದೆ ಒಟ್ಟುಗೂಡಿಕೊಂಡು ಸುದ್ದಿ ಮತ್ತು ಮನೋರಂಜನೆ ಪಡೆಯುವುದು ಸಾಮಾನ್ಯ ಘಟನೆಯಾಗಿತ್ತು. ಸುದ್ದಿ ಪ್ರಸಾರದಿಂದ ಪ್ರಾರಂಭವಾದ ರೇಡಿಯೊ ಪ್ರಸಾರ ನಂತರದ ದಿನಗಳಲ್ಲಿ ಸಂಗೀತ, ಕ್ರೀಡೆ ಮತ್ತು ವಿವಿಧ ಕಾರ್ಯಕ್ರಮಗಳವರೆಗೆ ಎಲ್ಲವನ್ನೂ ಪ್ರಸಾರ ಮಾಡುವ ಹಂತಕ್ಕೆ ಬೆಳೆಯಿತು. 1930ರ ವೇಳೆಗೆ ಪ್ರಪಂಚದಾದ್ಯಂತ ರೇಡಿಯೊ ಜನಪ್ರಿಯ ಮಾಧ್ಯಮವಾಗಿ ಬೆಳೆಯಿತು. ಆಗ ಜಗತ್ತಿನಾದ್ಯಂತ 500 ರೇಡಿಯೊ ಕೇಂದ್ರಗಳು ಇದ್ದವು. ಎರಡನೆಯ ಮಹಾಯುದ್ಧದ ಸಮಯದಲ್ಲಿ ರೇಡಿಯೊ ಮತ್ತೊಮ್ಮೆ ಯು.ಎಸ್. ಮತ್ತು ಯು.ಕೆ. ಎರಡೂ ರಾಷ್ಟ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು. ಪತ್ರಕರ್ತರ ಸಹಾಯದಿಂದ ಯುದ್ಧದ ಸುದ್ದಿಯನ್ನು ಸಾರ್ವಜನಿಕರಿಗೆ ಪ್ರಸಾರ ಮಾಡಿತ್ತು. ಎರಡನೇ ಮಹಾಯುದ್ಧದ ನಂತರ ರೇಡಿಯೊವನ್ನು ಬಳಸುವ ವಿಧಾನವೂ ಜಗತ್ತನ್ನು ಬದಲಾಯಿಸಿತು. ಕೇವಲ ಸುದ್ದಿ ಮತ್ತು ಮನೋರಂಜನೆಯ ಕೇಂದ್ರವಾಗಿದ್ದ ರೇಡಿಯೊ, ಯುದ್ಧದ ನಂತರ ಆ ಕಾಲದ ಸಂಗೀತ ಪ್ರಸಾರದ ಕಡೆಗೂ ಗಮನಹರಿಸಲು ಪ್ರಾರಂಭಿಸಿತು. ಸಂಗೀತದ ಮೂಲಕ ಎಲ್ಲಾ ವಯೋಮಾನದ ಜನರನ್ನು ತಲುಪಿತು. ಸಂಗೀತ ಮತ್ತು ರೇಡಿಯೊ ಒಂದಕ್ಕೊಂದು ಸಮಾನಾರ್ಥಕವಾಗುವವರೆಗೂ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. ಎಫ್.ಎಂ. ರೇಡಿಯೊ ಕೇಂದ್ರಗಳು ಮೂಲ ಎ.ಎಂ. ಸ್ಥಾನವನ್ನು ಹಿಂದಿಕ್ಕಲು ಪ್ರಾರಂಭಿಸಿದವು. ರಾಕ್ ಆ್ಯಂಡ್ ರೋಲ್‌ನಂತಹ ಸಂಗೀತದ ಹೊಸ ಪ್ರಕಾರಗಳು ಹೊರಹೊಮ್ಮಲು ಪ್ರಾರಂಭಿಸಿದವು. ಇಂದು ಜಗತ್ತಿನ ಎಲ್ಲೆಡೆ ರೇಡಿಯೊ ಕೇಂದ್ರಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿವೆ. ಕೆಲವೇ ಕೆಲವು ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ರೇಡಿಯೊ ಇಂದು ಕೇಳುಗರ ಮೆಚ್ಚಿನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಹಾಗೆ ಗಮನಿಸಿದರೆ ರೇಡಿಯೊ ತನ್ನ ಅಭಿವೃದ್ಧಿಗೆ ಇತರ ಎರಡು ಆವಿಷ್ಕಾರಗಳಿಗೆ ಋಣಿಯಾಗಿದೆ. ಟೆಲಿಗ್ರಾಫ್ ಮತ್ತು ಟೆಲಿಫೋನ್. ರೇಡಿಯೊ, ಟೆಲಿಗ್ರಾಫ್ ಮತ್ತು ಟೆಲಿಫೋನ್ ಈ ಮೂರು ತಂತ್ರಜ್ಞಾನಗಳು ನಿಕಟ ಸಂಬಂಧ ಹೊಂದಿವೆ. ರೇಡಿಯೊ ತಂತ್ರಜ್ಞಾನವು ವಾಸ್ತವವಾಗಿ ವೈರ್‌ಲೆಸ್ ಟೆಲಿಗ್ರಾಫಿ ಎಂದು ಪ್ರಾರಂಭವಾಯಿತು.

ರೇಡಿಯೊ ಎಂಬ ಪದವು ನಾವು ಕೇಳುವ ಇಲೆಕ್ಟ್ರಾನಿಕ್ ಉಪಕರಣವನ್ನು ಅಥವಾ ಅದರಿಂದ ಪ್ಲೇ ಆಗುವ ವಿಷಯವನ್ನು ಉಲ್ಲೇಖಿಸಬಹುದು. ರೇಡಿಯೊ ತರಂಗಗಳ ಆವಿಷ್ಕಾರದೊಂದಿಗೆ ಪ್ರಾರಂಭವಾದ ರೇಡಿಯೊ ಇಂದು ವೈವಿಧ್ಯಮಯವಾಗಿ ಬಳಕೆಯಾಗುತ್ತಿದೆ. ವಿದ್ಯುತ್ಕಾಂತೀಯ ಅಲೆಗಳು ಸಂಗೀತ, ಮಾತು, ಜಾಹೀರಾತು ಮತ್ತು ಇತರ ಕೇಳುಗ ಕಾರ್ಯಕ್ರಮಗಳನ್ನು ಗಾಳಿಯ ಮೂಲಕ ಅಗೋಚರವಾಗಿ ರವಾನಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ಅಚ್ಚರಿಯ ಸಂಗತಿ. ರೇಡಿಯೊಗಳು, ಮೈಕ್ರೋವೇವ್‌ಗಳು, ಕಾರ್ಡ್‌ಲೆಸ್ ಫೋನ್‌ಗಳು, ರಿಮೋಟ್ ನಿಯಂತ್ರಿತ ಆಟಿಕೆಗಳು, ಟೆಲಿವಿಷನ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಸಾಧನಗಳು ವಿದ್ಯುತ್ಕಾಂತೀಯ ತರಂಗಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ರೇಡಿಯೊ ತಂತ್ರಜ್ಞಾನಾಧಾರಿತ ಸಾಧನಗಳ ಬಳಕೆ ಇಂದು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಬಹುದು. 1915ರಲ್ಲಿ ಮೊದಲಬಾರಿಗೆ ರೇಡಿಯೊ ಮೂಲಕ ಭಾಷಣವನ್ನು ನ್ಯೂಯಾರ್ಕ್ ನಗರದಿಂದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅಟ್ಲಾಂಟಿಕ್ ಸಾಗರದಾದ್ಯಂತ ರವಾನಿಸಲಾಯಿತು. ಐದು ವರ್ಷಗಳ ನಂತರ, ವೆಸ್ಟಿಂಗ್‌ಹೌಸ್‌ನ ಕೆ.ಡಿ.ಕೆ.ಎ. ಪಿಟ್ಸ್‌ಬರ್ಗ್ ಹಾರ್ಡಿಂಗ್ ಕಾಕ್ಸ್ ಚುನಾವಣಾ ವರದಿಯನ್ನು ರೇಡಿಯೊ ಮೂಲಕ ಪ್ರಸಾರ ಮಾಡಿತು. 1927 ರಲ್ಲಿ ಉತ್ತರ ಅಮೆರಿಕ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ವಾಣಿಜ್ಯ ರೇಡಿಯೊ ಟೆಲಿಫೋನಿ ಸೇವೆಯನ್ನು ತೆರೆಯಲಾಯಿತು. 1935ರಲ್ಲಿ ತಂತಿ ಮತ್ತು ರೇಡಿಯೊ ಸರ್ಕ್ಯೂಟ್‌ಗಳ ಸಂಯೋಜನೆಯನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಮೊದಲ ದೂರವಾಣಿ ಕರೆಯನ್ನು ಮಾಡಲಾಯಿತು.

ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್ 1933 ರಲ್ಲಿ ಆವರ್ತನ ಮಾಡ್ಯುಲೇಟೆಡ್ ಅಥವಾ ಎಫ್.ಎಂ. ರೇಡಿಯೊವನ್ನು ಕಂಡುಹಿಡಿದರು. ವಿದ್ಯುತ್ ಉಪಕರಣಗಳು ಮತ್ತು ಭೂಮಿಯ ವಾತಾವರಣದಿಂದ ಉಂಟಾಗುವ ಶಬ್ದ ಸ್ಥಿರತೆಯನ್ನು ನಿಯಂತ್ರಿಸುವ ಮೂಲಕ ಎಫ್.ಎಂ. ರೇಡಿಯೊದ ಆಡಿಯೊ ಸಿಗ್ನಲ್ ಅನ್ನು ಸುಧಾರಿಸಿತು. 1936 ರವರೆಗೆ ಎಲ್ಲಾ ಅಮೆರಿಕನ್ ಅಟ್ಲಾಂಟಿಕ್ ಟೆಲಿಫೋನ್ ಸಂವಹನವನ್ನು ಇಂಗ್ಲೆಂಡ್ ಮೂಲಕ ರವಾನಿಸಬೇಕಾಗಿತ್ತು. ಅದೇ ವರ್ಷ ಪ್ಯಾರಿಸ್‌ಗೆ ನೇರ ರೇಡಿಯೊ ಟೆಲಿಫೋನ್ ಸರ್ಕ್ಯೂಟ್ ತೆರೆಯಲಾಯಿತು. 1965ರಲ್ಲಿ, ವಿಶ್ವದ ಮೊದಲ ಮಾಸ್ಟರ್ ಎಫ್.ಎಂ. ಆ್ಯಂಟೆನಾ ವ್ಯವಸ್ಥೆಯನ್ನು ನ್ಯೂಯಾರ್ಕ್ ನಗರದ ಎಂಪೈರ್ ಸ್ಟೇಟ್ ಕಟ್ಟಡದ ಮೇಲೆ ಪ್ರತ್ಯೇಕ ಎಫ್.ಎಂ. ಕೇಂದ್ರಗಳನ್ನು ಒಂದು ಮೂಲದಿಂದ ಏಕಕಾಲದಲ್ಲಿ ಪ್ರಸಾರ ಮಾಡಲು ವಿನ್ಯಾಸಗೊಳಿಸಲಾಗಿದೆ.

ದೂರದರ್ಶನದ ಎಂಟ್ರಿಯೊಂದಿಗೆ ರೇಡಿಯೊ ಒಂದಿಷ್ಟು ಹಿನ್ನಡೆಯನ್ನು ಸಾಧಿಸಿತು. ದೃಶ್ಯರೂಪದ ಮಾಧ್ಯಮವಾದ ದೂರದರ್ಶನ ಕೇವಲ ಕೇಳು ಮಾಧ್ಯಮವಾಗಿದ್ದ ರೇಡಿಯೊದ ಪ್ರಭಾವವನ್ನು ಕಡಿಮೆ ಮಾಡಿತು. ಆದರೆ ರೇಡಿಯೊ ಮಾತ್ರ ಇಂದಿಗೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ತನ್ನ ಮೊದಲಿನ ಸ್ಥಿರತೆ ಮತ್ತು ಗಾಂಭೀರ್ಯತೆಯನ್ನು ಕಾಪಾಡಿಕೊಂಡು ಬಂದಿದೆ. 21ನೇ ಶತಮಾನದಲ್ಲಿ ಇಂಟರ್‌ನೆಟ್ ಆಧಾರಿತ ಆಡಿಯೊ ಸೇವೆಗಳು ಮತ್ತು ಡಿಜಿಟಲ್ ಉಪಗ್ರಹ ಸೇವೆಗಳಿಂದ ಸ್ಪರ್ಧಾತ್ಮಕ ಒತ್ತಡವನ್ನು ಎದುರಿಸುತ್ತಿದೆ. ಆದಾಗ್ಯೂ ಇದು ಇನ್ನೂ ಅನೇಕರಿಗೆ ಡಿಜಿಟಲ್ ಪರದೆಯತ್ತ ನೋಡುವುದಕ್ಕಿಂತ ಹೆಚ್ಚು ವಿಶ್ರಾಂತಿ ನೀಡುವ ಮಾಧ್ಯಮವಾಗಿ ಅದರ ಮೂಲ ಆಕರ್ಷಣೆಯನ್ನು ಉಳಿಸಿಕೊಂಡಿದೆ. ದೂರಸಂಪರ್ಕ ಮತ್ತು ತುರ್ತು ಸಂದರ್ಭಗಳಲ್ಲಿ ಅದರ ಪ್ರಾಯೋಗಿಕ ಅನ್ವಯಿಕೆಗಳನ್ನು ಕಡೆಗಣಿಸದಿರುವುದು ಸಹ ಮುಖ್ಯವಾಗಿದೆ. ಇತರ ಮಾಧ್ಯಮಗಳು ಪ್ರಾಮುಖ್ಯತೆಯನ್ನು ಪಡೆದಾಗ, ರೇಡಿಯೊ ಯಾವಾಗಲೂ ನಮ್ಮಾಂದಿಗೆ ಭಾವನಾತ್ಮಕ ರೀತಿಯಲ್ಲಿ ಇರುತ್ತದೆ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News