×
Ad

ಬಿಬಿಎಂಪಿ ಎಲ್ಲ ವಾರ್ಡ್‍ಗಳಲ್ಲೂ ಮೀನು ಮಾರಾಟ ಕೇಂದ್ರ ಆರಂಭ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-16 17:37 IST

ಬೆಂಗಳೂರು, ಅ.16: ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲೂ ಮೀನು ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ರವಿವಾರ ನಗರದ ಅರಮನೆ ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ‘ಒಳನಾಡು ಮೀನು ಉತ್ಪಾದಕರ ಸಮಾವೇಶ-2022’ನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೀನಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲೂ ಮೀನು ಮಾರಾಟ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಬೆಂಗಳೂರಿನಲ್ಲಿ ಖಾಸಗಿಯವರು ಮೀನು ಮಾರಾಟ ಅಂಗಡಿಗಳನ್ನು ಆರಂಭಿಸಲು ಮುಂದಾದರೆ ಅವರಿಗೂ ಜಾಗದ ವ್ಯವಸ್ಥೆ ಮಾಡಲಾಗುವುದು. ಮೀನು ಮೊದಲಿನಿಂದಲೂ ಮನುಷ್ಯನ ಆಹಾರ. ಮೀನು ಸಸ್ಯಹಾರಿ ಪ್ರಾಣಿ, ಆದರೆ ಮೀನು ತಿನ್ನುವವರು ಮಾಂಸಹಾರಿಗಳು. ಕೆಲವು ದೇಶಗಳಲ್ಲಿ ಮೀನು ತಿನ್ನುವುದನ್ನು ಸಸ್ಯಹಾರ ಎಂದು ಹೇಳುತ್ತಾರೆ ಎಂದು ಹೇಳಿದರು. 

ಮೀನುಗಾರಿಕೆಯಿಂದ ಸಾಕಷ್ಟು ಜನರಿಗೆ ಉದ್ಯೋಗ, ಆರ್ಥಿಕ ಲಾಭ ಸಿಗುತ್ತಿದೆ. ಒಳನಾಡು ಮೀನುಗಾರಿಕೆಯಲ್ಲಿ ಹೊಸ ಸಂಶೋಧನೆ ನಡೆಸಿ, ಹೊಸ ತಳಿಗಳ ಪ್ರಯೋಗ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಸಮುದ್ರ ಮೀನುಗಾರಿಕೆಗೂ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿದೆ ಎಂದು ಹೇಳಿದರು. 

ಆಳ ಮೀನುಗಾರಿಕೆಯಲ್ಲಿ ಉತ್ಕೃಷ್ಟ ಮೀನುಗಳು ದೊರಕುತ್ತವೆ. ಹೀಗಾಗಿ, ಪ್ರಧಾನಮಂತ್ರಿಗಳ ಮೀನುಗಾರರ ಯೋಜನೆಯಡಿ ರಾಜ್ಯದಲ್ಲಿ 100 ಆಳಸಮುದ್ರ ಮೀನುಗಾರಿಕೆಯ ಹಡಗುಗಳನ್ನು ಒದಗಿಸಲು ನಿರ್ಧರಿಸಿದ್ದೇವೆ. ಇದರಲ್ಲಿ ಶೇ.40 ರಷ್ಟು ಸಬ್ಸಿಡಿ ಇದೆ. ಹಾಗೆಯೇ  ಸಾವಿರ ಮೀನುಗಾರರ ಸಂಘಗಳಿಗೆ ಸಹಾಯ ಧನ 3 ರಿಂದ 5 ಲಕ್ಷ ರೂ. ಗಳವರೆಗೂ ಸರಕಾರ ನೀಡುತ್ತಿದೆ. ಈ ಮೀನುಗಾರಿಕೆ ವಲಯ ಅಭಿವೃದ್ಧಿಯಾದರೆ ದೇಶದ ಆರ್ಥಿಕತೆಯೂ ಮುಂದುವರೆಯುತ್ತದೆ ಎಂದರು. 

ಪ್ರವಾಹದಲ್ಲಿ ಹಡಗುಗಳಿಗೆ ಹಾನಿಯಾಗಿದ್ದರೆ ಅವುಗಳ ರಿಪೇರಿಗೆ ಅನುದಾನ ನೀಡಲಾಗುವುದು. ಅಲ್ಲದೆ, ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೆರೆಯನ್ನು ಮೀನುಗಾರಿಕೆಗೆ ನೀಡಲಾಗುವುದು. ಮೀನುಗಳ ಬಲೆಯನ್ನು 300 ಜನರಿಗೆ ನೀಡಲಾಗುತ್ತಿದ್ದು. ಇದನ್ನು 1000 ಜನರಿಗೆ ಹೆಚ್ಚಿಸಬೇಕು ಎಂದು ಅವರು ಮೀನುಗಾರಿಕೆ ಇಲಾಖೆಗೆ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. 

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ, ಸಚಿವರಾದ ಡಾ.ಸಿ.ಎನ್.ಅಶ್ವತ್ಥರಾಯಣ, ಭೈರತಿ ಬಸವರಾಜು, ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು. 

1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ: ಮೀನುಗಾರರಿಗೆ 5 ಸಾವಿರ ಮನೆಗಳನ್ನು ಜನವರಿ ಅಂತ್ಯದೊಳಗೆ ನಿರ್ಮಿಸಿ ನೀಡಲಾಗುವುದು. 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುವುದು. ಇದಕ್ಕೆ 40 ಕೋಟಿ ರೂ. ವೆಚ್ಚವಾಗಲಿದ್ದು, ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News