×
Ad

AICC ಅಧ್ಯಕ್ಷ ಸ್ಥಾನಕ್ಕೆ ನಾಳೆ (ಅ.17) ಚುನಾವಣೆ: KPCC ಕಚೇರಿಯಲ್ಲಿನ ಮತಗಟ್ಟೆಯಲ್ಲಿ ಮತದಾನಕ್ಕೆ ಸಿದ್ಧತೆ

Update: 2022-10-16 18:40 IST

ಬೆಂಗಳೂರು, ಅ. 16: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಾಳೆ(ಅ.17)ಮತದಾನ ನಡೆಯಲಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಕಣದಲ್ಲಿದ್ದು, ಮತದಾನಕ್ಕೆ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಒಟ್ಟಾರೆ 9 ಸಾವಿರಕ್ಕೂ ಅಧಿಕ ಮಂದಿ ಎಐಸಿಸಿ ಪ್ರತಿನಿಧಿಗಳು ಮತ ಚಲಾಯಿಸುವ ಹಕ್ಕು ಹೊಂದಿದ್ದು, ಕರ್ನಾಟಕದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 494 ಮಂದಿ ಪ್ರತಿನಿಧಿಗಳು ಹಕ್ಕು ಚಲಾಯಿಸಲಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, 479 ಪ್ರದೇಶ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು, 15 ಮಂದಿ ಶಾಸಕಾಂಗ ಪಕ್ಷದ ಸದಸ್ಯರು ಮತದಾನ ಮಾಡಲಿದ್ದಾರೆ.

ರಾಜ್ಯಕ್ಕೆ ಕೆಪಿಸಿಸಿ ಕಚೇರಿ ಮಾತ್ರವೆ ಏಕೈಕ ಮತಗಟ್ಟೆಯಾಗಿರಲಿದೆ. ಇಲ್ಲಿಗೆ ಆಗಮಿಸಿ ಶಾಸಕಾಂಗ ಪಕ್ಷದ(ಸಿಎಲ್‍ಪಿ) ಸದಸ್ಯರುಹಾಗೂಪಿಸಿಸಿಪ್ರತಿನಿಧಿಗಳು ಮತ ಚಲಾಯಿಸಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆಯಿಂದ ಮತದಾರರು ಬೆಂಗಳೂರಿಗೆ ಆಗಮಿಸಿ ಮತ ಚಲಾವಣೆ ಮಾಡಬೇಕೆಂದು ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಗೆ ರಾಹುಲ್ ಗಾಂಧಿ ಎಲ್ಲಿ ಮತ ಚಲಾಯಿಸುತ್ತಾರೆಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್ 

ಸಂಗನಕಲ್ಲು ಕ್ಯಾಂಪ್‍ನಲ್ಲಿ ರಾಹುಲ್ ಮತ: ಎಐಸಿಸಿ ನಾಯಕ ರಾಹುಲ್ ಗಾಂಧಿ‘ಭಾರತ್ ಜೋಡೊ ಯಾತ್ರೆ' ಕೈಗೊಂಡಿದ್ದು, ಮತದಾನ ಹಿನ್ನೆಲೆ ಯಾತ್ರೆ ಮೊಟಕುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ರಾಹುಲ್‍ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ 40 ಮಂದಿ ಸದಸ್ಯರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ.

ಬಳ್ಳಾರಿಯ ಸಂಗನಕಲ್ಲು ಕ್ಯಾಂಪ್‍ನಲ್ಲಿ ಸ್ಥಾಪಿಸಿರುವ ವಿಶೇಷ ಮತಗಟ್ಟೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರರು ಮತ ಚಲಾವಣೆ ಮಾಡಲಿದ್ದಾರೆ.ಸದ್ಯ ರಾಜ್ಯದ ಹಲವು ನಾಯಕರು ರಾಹುಲ್ ಗಾಂಧಿ ಜತೆ ಯಾತ್ರೆಯಲ್ಲಿಭಾಗಿಯಾಗಿದ್ದು, ಅವರಿಗೆ ಈ ಕ್ಯಾಂಪ್‍ನ ಮತಗಟ್ಟೆಯಲ್ಲಿಮತ ಚಲಾಯಿಸುವ ಅವಕಾಶ ಇಲ್ಲ. ಹೀಗಾಗಿ ಎಲ್ಲರೂ ಬೆಂಗಳೂರಿಗೆ ಆಗಮಿಸಿ ಮತ ಚಲಾಯಿಸಬೇಕಿದೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ಬೆಂಗಳೂರಲ್ಲೇ ಮತ ಚಲಾಯಿಸಲಿದ್ದಾರೆ. ನಾಳಿನ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ವಿಪಕ್ಷ ನಾಯನ ಸಿದ್ದರಾಮಯ್ಯ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಪ್ರತಿನಿಧಿಗಳು ಇಂದೇ ನಗರಕ್ಕೆ ಆಗಮಿಸಿದ್ದು ಬೀಡುಬಿಟ್ಟಿದ್ದು, ನಾಳೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಅ.19ಕ್ಕೆ ಫಲಿತಾಂಶ: ನಾಳೆ ಮತದಾನ ನಡೆಯಲಿದ್ದು, ಅ.19ಕ್ಕೆ ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ. 22 ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ರಾಜ್ಯದಲ್ಲಿನ ಬಹುತೇಕ ಕಾಂಗ್ರೆಸ್ ಪ್ರತಿನಿಧಿಗಳ ಒಲವು ಮಲ್ಲಿಕಾರ್ಜುನ ಖರ್ಗೆ ಪರವಾಗಿದ್ದು, ಅವರ ಗೆಲವು ನಿಶ್ಚಿತವಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News