ಬೆಂಗಳೂರು: ಮಳೆಗೆ ನಗರದಲ್ಲಿ ಹೆಚ್ಚಿದ ರಸ್ತೆಗುಂಡಿಗಳು..!
Update: 2022-10-16 19:45 IST
ಬೆಂಗಳೂರು, ಅ.16: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಗುಂಡಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ನಗರದ ಬಹುತೇಕ ಕಡೆ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳಿಂದ ಜಾರಿ ಬೀಳುವ ಆತಂಕದಿಂದ ವಾಹನ ಸವಾರರು ತೆರಳಬೇಕಾಗಿದೆ. ಮತ್ತೊಂದೆಡೆ ಕೆಲವೆಡೆ ರಸ್ತೆ ಸಂಪರ್ಕವಿಲ್ಲದೆ ವಾಹನಗಳು ಇಲ್ಲಿ ಹೋಗಲು ಪರದಾಡಬೇಕಾಗಿದೆ.
ನಿನ್ನೆ ರಾತ್ರಿ ಧಾರಕಾರ ಸುರಿದ ಮಳೆಯಿಂದಾಗಿ ಇಲ್ಲಿನ ಅರಮನೆ ರಸ್ತೆಯ ಸಿಐಡಿ ಕಚೇರಿಯ ತಡೆಗೋಡೆ ಉರುಳಿ ಬಿದ್ದಿದೆ. ಮತ್ತೊಂದೆಡೆ ಸ್ಯಾಂಕಿ ಟ್ಯಾಂಕ್ ಮುಖ್ಯ ರಸ್ತೆಯಲ್ಲಿ ಬೃಹತ್ ಗುಂಡಿ ಕಂಡುಬಂದಿದ್ದು, ವಾಹನ ಸವಾರರಲ್ಲಿ ಆತಂಕ ದ್ವಿಗುಣ ಮಾಡಿದೆ.
ಇನ್ನೂ, ಕಳೆದ ಐದು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಿನ್ನೆ ಅಧಿಕ ಮಳೆ ವರದಿಯಾಗಿದೆ. 2017ರಲ್ಲಿ 170 ಮಿ.ಮೀ. ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಇದೀಗ ಐದು ವರ್ಷದ ಬಳಿಕ 166 ಮಿ.ಮೀ. ಮಳೆಯಾಗಿದೆ. 2011ರಲ್ಲಿ 110 ಮಿ.ಮೀ. ಮಳೆ ಸುರಿದು ದಾಖಲೆ ಬರೆದಿತ್ತು.