ರೈತ ಚಳವಳಿ ರೈತರಿಗಷ್ಟೇ ಸಂಬಂಧಿಸಿದಲ್ಲ: ರೈತ ನಾಯಕ ಕೆ.ಟಿ.ಗಂಗಾಧರ್
ಬೆಳಗಾವಿ, ಅ. 16: ‘ಉತ್ತರ ಕರ್ನಾಟಕ ಭಾಗದ ರೈತ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ ಅವರು ಪತ್ರಿಕೋದ್ಯಮ ಹಾಗೂ ಚಳವಳಿ ಎರಡೂ ಮಾರ್ಗಗಳಲ್ಲಿ ಮುಂಚೂಣಿಯಲ್ಲಿದ್ದವರು. ಅವರು ರೈತರಿಗೆ ಅನ್ಯಾಯವಾದಾಗ ಸರಕಾರವನ್ನು ಎಚ್ಚರಿಸಿದವರು' ಎಂದು ರೈತ ನಾಯಕ ಕೆ.ಟಿ.ಗಂಗಾಧರ್‍ತಿಳಿಸಿದ್ದಾರೆ.
ರವಿವಾರ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾ ಭವನದಲ್ಲಿ ಏರ್ಪಡಿಸಿದ್ದ ಮುಚಳಂಬಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರೈತ ಚಳವಳಿ ಕೇವಲ ರೈತರಿಗೆ ಮಾತ್ರ ಬೇಕಾಗಿದೆ ಎಂಬ ತಪ್ಪು ಕಲ್ಪನೆ ದೇಶದಲ್ಲಿದೆ. ಆದರೆ, ಯಾರು ಅನ್ನ ತಿನ್ನುತ್ತಾರೋ ಎಲ್ಲರಿಗೂ ಇದು ಸಂಬಂಧಿಸಿದ್ದು' ಎಂದು ನುಡಿದರು.
‘ರೈತರ ಕೈಯಲ್ಲಿ ಭೂಮಿ ಇದ್ದರೆ ಮಾತ್ರ ಅವರು ಬೆಳೆ ಬೆಳೆಯುತ್ತಾರೆ. ಕೃಷಿಯಿಂದ ಮಾತ್ರ ಸಾಮಾಜಿಕ, ಔದ್ಯೋಗಿಕ ಹಾಗೂ ಆರ್ಥಿಕ ವಲಯಗಳು ಬದುಕುಲು ಸಾಧ್ಯ. ಇಂತಹ ದೊಡ್ಡ ಸಂಗತಿಗಳನ್ನು ಮುಂದಿಟ್ಟುಕೊಂಡೇ ಮುಚಳಂಬಿ ಅವರು ಪ್ರಬಲವಾಗಿ ವಿಷಯ ಮಂಡಿಸುತ್ತಿದ್ದರು. ಅವರು ಎಲ್ಲರಿಗೂ ಮಾದರಿ ವ್ಯಕ್ತಿತ್ವದ ವ್ಯಕ್ತಿ' ಎಂದು ಗಂಗಾಧರ್ ಸ್ಮರಿಸಿದರು. ಡಂಬಳ ಎಡೆಯೂರು ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮಿ, ಹಿರೇಮಠದ ಚಂದ್ರಶೇಖರ ಸ್ವಾಮಿ, ಮಾಜಿ ಸಚಿವ ಶಶಿಕಾಂತ ನಾಯಕ, ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.