ಕಾವ್ಯ ಮೀಮಾಂಸೆಗೆ ಸ್ತ್ರೀವಾದ ಸೇರಬೇಕು: ವಿಮರ್ಶಕಿ ಆಶಾದೇವಿ
ಬೆಂಗಳೂರು, ಅ. 16: ಶೋಭಾ ಗುನ್ನಾಪುರ ಅವರ ವ್ಯಕ್ತಿತ್ವ ಹಾಗೂ ಅವರ ಕೃತಿಗೆ ಇರುವ ಸಂಬಂಧ ಇಂದಿನ ಮಹಿಳಾ ಸಂಕಥನವನ್ನು ಬಲಪಡಿಸಬೇಕಿರುವ ಆಧಾರವನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾವ್ಯ ಮೀಮಾಂಸೆಗೆ ಸ್ತ್ರೀವಾದ ಸೇರಬೇಕಾಗಿದೆ ಎಂದು ವಿಮರ್ಶಕಿ ಆಶಾದೇವಿ ಅಭಿಪ್ರಾಯಪಟ್ಟರು.
ರವಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ‘ಅಕ್ಕಮಹಾದೇವಿ ಸಭಾಂಗಣ’ದಲ್ಲಿ ಆಯೋಜಿಸಿದ್ದ ಶೋಭಾ ಗುನ್ನಾಪೂರ ಅವರ ‘ಭೂಮಿಯ ಋಣ’ ಕಥಾಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯದಲ್ಲಿ ಮಹಿಳೆಯರ ಅಭಿವ್ಯಕ್ತಿಯನ್ನು ಬೇರೆಯ ನೆಲೆಗಟ್ಟಿನಲ್ಲಿ ಕೂಡಿಡುವ ಪ್ರಯತ್ನ ನಡೆಯುತ್ತಿದೆ. ಹೆಣ್ಣು ಮಕ್ಕಳು ಏನು ಮಾಡಿದರೂ, ಅದರಲ್ಲಿ ಚಳುವಳಿ ಇರುತ್ತದೆ. ಅದನ್ನು ಗುರುತಿಸುವ ಮನಸ್ಥಿತಿಯನ್ನು ನಾವು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಲೇಖಕ ಬಿ.ಎಂ.ಗಿರಿರಾಜ್ ಅವರು ಮಾತಾನಾಡಿ, ಈ ಕೃತಿಯು ತಾಯಂದಿರ ಮಮಕಾರದ ಬಗ್ಗೆ ತಿಳಿಸುತ್ತದೆ ಹಾಗೂ ಎಲ್ಲರಿಗೂ ಮನ ಮುಟ್ಟುವ ಕತೆಯಾಗಿದೆ ಎಂದರು.
ಲೇಖಕಿ ಶೋಭಾ ಗುನ್ನಾಪೂರ ಅವರುಮಾತಾನಾಡಿ, ಮಕ್ಕಳ ಶಿಕ್ಷಣದ ಕಲಿಕೆಯಲ್ಲಿ ನನ್ನ ಬರವಣಿಗೆ ಪ್ರಾರಂಭವಾಯಿತು. ನಾನು ಗ್ರಾಮೀಣ ಭಾಗದ ಮಹಿಳೆಯಾದರೂ, ನನ್ನ ಜೀವನದ ಸೂಕ್ಷ್ಮ ವಿಚಾರಗಳು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿವೆ. ಅಂತಹ ವಿಚಾರಗಳನ್ನು ಅಕ್ಷರದ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಲೇಖಕ, ಡಾ. ನಟರಾಜ್ ಹುಳಿಯಾರ್ ಅವರು ಮಾತಾನಾಡಿ, ಶೋಭಾ ಗುನ್ನಾಪೂರ ಅವರ ಕುಟುಂಬ ಒಂದು ಸಾಂಸ್ಕøತಿಕ ವಿದ್ಯಮಾನದ ಕುಟುಂಬವಾಗಿದೆ. ಭೂಮಿಯ ಋಣ ಕೃತಿಯಲ್ಲಿ ಭಾಷೆಯ ಸೊಗಡು ಬಹಳ ಚೆನ್ನಾಗಿದೆ. ಸರಳವಾದ ಭಾಷೆಯಲ್ಲಿ ಅದ್ಬುತವಾದ ಕತೆಗಳನ್ನು ಶೋಭಾ ಅವರು ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವೈಷ್ಣವಿ ಪ್ರಕಾಶನದ ಮುದಿರಾಜ್ ಬಾಣದ್ ಸೇರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.