ಸುರತ್ಕಲ್‌ ಟೋಲ್ ವಿರೋಧಿ ಹೋರಾಟಗಾರರಿಗೆ ನೋಟಿಸ್‌: ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

Update: 2022-10-17 07:18 GMT

ಮಂಗಳೂರು, ಅ. 17: ಸುರತ್ಕಲ್‌ನ ಟೋಲ್ ಗೇಟ್ ವಿರೋಧಿ ಹೋರಾಟಗಾರರ ವಿರುದ್ಧ ನೋಟಿಸ್ ಜಾರಿಗೊಳಿಸಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಇಂದು‌ ಪ್ರತಿಭಟನೆ ನಡೆಯಿತು.

ನಗರದ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಹೋರಾಟಗಾರರಿಗೆ ನೋಟಿಸ್ ನೀಡಿದ ಕ್ರಮವನ್ನು ಖಂಡಿಸಲಾಯಿತು.‌

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಜನಪರ ಹೋರಾಟದ ಮುಂದೆ ಯಾವುದೇ ಶಕ್ತಿ ನಿಲ್ಲುವುದಿಲ್ಲ. ಯಾವುದೇ ರೀತಿಯಲ್ಲಿ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ನಡೆಸಿದರೂ ನಾಳಿನ ಹೋರಾಟ ನಡೆಯಲಿದೆ. ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದರು.

ಹಿರಿಯ ದಲಿತ ಮುಖಂಡರಾದ ಎಂ. ದೇವದಾಸ್ ಮಾತನಾಡಿ, ಹೋರಾಟಗಾರರ ಮನೆಗೆ ರಾತ್ರಿ ಹೊತ್ತು ಅದರಲ್ಲೂ ಮಹಿಳಾ ಹೋರಾಟಗಾರರ ಮನೆಗೆ ಪೊಲೀಸರು ಭೇಟಿ ನೀಡಿ ನೋಟಿಸ್ ನೀಡಿ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದರು.‌

ಸಂವಿಧಾನ ಬದ್ಧ ಹಾಗೂ ಕಾನೂನು ಚೌಕಟ್ಟಿನೊಳಗೆ ನಮ್ಮ ಕಾರ್ಯಕ್ರಮ ನಾಳೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರೂ ಈ ರೀತಿ ನೋಟಿಸ್ ನೀಡಿ ಬೆದರಿಸುವ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ ಆರೋಪಿಸಿದರು.

ಈ ರೀತಿ ಸಾಮಾಜಿಕ ಚಳವಳಿಯನ್ನು ಪೊಲೀಸರ ನೋಟಿಸ್ ನಿಂದ ಹತ್ತಿಕ್ಕಲು ಸಾಧ್ಯವಾಗದು ಎಂದು ಸಿಪಿಐ ಮುಖಂಡ ಶೇಖರ್ ಖಂಡಿಸಿದರು.‌

ನಾಳೆ ಕಾರ್ಯಕ್ರಮಕ್ಕೆ ಬಸ್ಸು ನೀಡಬಾರದು ಎಂದು ಬಸ್ಸು ಮಾಲಕರಿಗೆ ಪೊಲೀಸರಿಂದ ಎಚ್ಚರಿಕೆ ನೀಡಲಾಗಿದೆ. ಆದರೆ ಬಸ್ಸು ಇಲ್ಲದಿದ್ದರೆ ನಡೆದು ಪ್ರತಿಭಟನಾ ಸ್ಥಳಕ್ಕೆ ಹೋಗಲು ನಮಗೆ ಗೊತ್ತು ಎಂದು ಡಿವೈಎಫ್‌ಐ ಮುಖಂಡ ಸಂತೋಷ್ ಕುಮಾರ್ ಬಜಾಲ್ ಹೇಳಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ದಲಿತ ನಾಯಕ ರಘು ಎಕ್ಕಾರು, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಜೆಡಿಎಸ್ ಜಿಲ್ಲಾ ಮುಖಂಡರಾದ ಅಲ್ತಾಫ್ ತುಂಬೆ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಅಝೀಝ್, ಸಿಪಿಎಂ ಜಿಲ್ಲಾ ಮುಖಂಡರಾದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಸಿಪಿಐನ ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಕರುಣಾಕರ್, ಸುರೇಶ್, ಸಾಮರಸ್ಯ ಮಂಗಳೂರು ಸಂಘಟನೆಯ ಸಮರ್ಥ್ ಭಟ್, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಮುಖಂಡ ಲಾರೆನ್ಸ್, ಡಿವೈಎಫ್‌ಐ ಮುಖಂಡ ನವೀನ್ ಕೊಂಚಾಡಿ, ರಫೀಕ್ ಹರೇಕಳ, ಸಾದಿಕ್ ಕಣ್ಣೂರು, ಮನೋಜ್ ಉರ್ವಾಸ್ಟೋರ್, ಜಗದೀಶ್ ಬಜಾಲ್, ದಲಿತ ಹಕ್ಕುಗಳ ಸಮನ್ವಯ ಸಮಿತಿಯ ತಿಮ್ಮಯ್ಯ ಕೊಂಚಾಡಿ,  ಜೆಎಂಎಸ್ ಜಿಲ್ಲಾ ಮುಖಂಡರಾದ ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜಾ, ಸಿಐಟಿಯು ಮುಕಂಡರಾದ ಮುಸ್ತಫ ಕಲ್ಲಕಟ್ಟೆ, ವಿಲ್ಲಿ ವಿಲ್ಸನ್, ಮೀನುಗಾರರ ಸಂಘಟದ ಮುಖಂಡರಾದ ತಯ್ಯೂಬ್ ಬೆಂಗರೆ, ನೌಶಾದ್ ಬೆಂಗರೆ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ವಿದ್ಯಾರ್ಥಿ ಜನತಾದಳದ ಬಿಲಾಲ್ ಮೊದಲಾದವರು ಉಪಸ್ಥಿತರಿದ್ದರು.

ಹೋರಾಟ ನಿಲ್ಲದು- ಯಾವುದೇ ಕೇಸಿಗೂ ಹೆದರುವುದಿಲ್ಲ


"ಕಳೆದ ಆರು ವರ್ಷಗಳಿಂದ ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್ ವಿರುದ್ಧ ಜನಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಜನರ ಹಣವನ್ನು ಅಕ್ರಮವಾಗಿ ಲೂಟಿ ಮಾಡುವ ವಿರುದ್ಧ ನಡೆಸಲಾಗುತ್ತಿರುವ ಹೋರಾಟವನ್ನು ಮುರಿಯುವ ಪ್ರಯತ್ನದ ಭಾಗವಾಗಿ ಇದೀಗ ಪೊಲೀಸರು ಹೋರಾಟಗಾರರಿಗೆ  ನೋಟೀಸು ನೀಡಿದ್ದಾರೆ. ನೋಟೀಸಿನಲ್ಲಿ ಹೋರಾಟಗಾರರನ್ನು ಕಿಡಿಗೇಡಿಗಳು, ಕೋಮು ಪ್ರಚೋದನೆ ಮಾಡುವವರು ಎಂದಿದ್ದಾರೆ. ಹಾಗಿದ್ದರೆ ಅಂತಹ ಕಿಡಿಕೇಡಿಗಳನ್ನು ಪೊಲೀಸ್ ಅಧಿಕಾರಗಳೇ ಕರೆದು ಮಾತನಾಡಿ, ರಾಜಮರ್ಯಾದಿ ನೀಡಿರುವುದು ಯಾಕಾಗಿ. ಪೊಲೀಸ್ ಲಾಠಿ ಏಟಿನ ಮೂಲಕವೇ ನಮ್ಮ ಚಳವಳಿ ನಡೆದು ಬಂದಿರುವುದು. ಹಾಗಾಗಿ ಯಾವುದೇ ಕೇಸಿಗೂ, ಲಾಠಿ ಏಟಿಗೂ ನಾವು ಹೆದರುವವರಲ್ಲ. ಹೋರಾಟ ನಿಲ್ಲುವುದಿಲ್ಲ".

ಬಿ.ಕೆ. ಇಮ್ತಿಯಾಝ್, ಅಧ್ಯಕ್ಷರು, ಡಿವೈಎಫ್‌ಐ, ದ.ಕ. ಜಿಲ್ಲೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News