ಬಿಎಂಎಸ್ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಕರಣ: ಯಡಿಯೂರಪ್ಪ, ಅಶ್ವತ್ಥನಾರಾಯಣ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

Update: 2022-10-18 12:12 GMT
ಬಿ.ಎಸ್.ಯಡಿಯೂರಪ್ಪ |  ಡಾ.ಸಿ.ಎನ್.ಅಶ್ವತ್ಥನಾರಾಯಣ 

ಬೆಂಗಳೂರು, ಅ. 18: ಬಿಎಂಎಸ್ ಡೀಡ್ ತಿದ್ದುಪಡಿ ಮತ್ತು ಅಜೀವ ಟ್ರಸ್ಟಿ ನೇಮಕದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ ಎಸ್) ಪಕ್ಷವು ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ. 

ಬಿಎಂಎಸ್ ಶಿಕ್ಷಣ ದತ್ತಿಯ ಡೀಡ್ ತಿದ್ದುಪಡಿ ಪ್ರಸ್ತಾವನೆಯನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಿರಸ್ಕರಿಸಲಾಗಿತ್ತು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅಶ್ವತ್ಥನಾರಯಣ ಅದನ್ನು ಅನುಮೋದಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಕೆಆರ್ ಸ್ ಪಕ್ಷ ಆಗ್ರಹಿಸಿದೆ. 

ಅಂದಾಜು 2 ಸಾವಿರ ಕೋಟಿ ರೂ.ಗೂ ಅಧಿಕ ಸಂಪತ್ತನ್ನು ಬಿಎಂಎಸ್ ಸಾರ್ವಜನಿಕ ಸಂಸ್ಥೆ ಹೊಂದಿದೆ. ಇದನ್ನು ಕಬಳಿಸಲು ದುಷ್ಟ ಶಕ್ತಿಗಳು ಹವಣಿಸುತ್ತಿವೆ. ಸಂಸ್ಥೆಗೆ ಸರಕಾರದ ಪ್ರತಿನಿಧಿಯನ್ನು ಮುಖ್ಯಮಂತ್ರಿ ಕಚೇರಿಯಿಂದ ನೇಮಕಾತಿ ಮಾಡಿರುವ ಬಗ್ಗೆ ದಾಖಲೆ ಇರುವುದು ಸಂದೇಹಾಸ್ಪದವಾಗಿದೆ ಎಂದು ಕೆಆರ್ ಎಸ್ ಪಕ್ಷ ತಿಳಿಸಿದೆ.

ಹಾಗೆಯೇ ಇಂಜಿನಿಯರಿಂಗ್ ಮತ್ತು ಪದವಿ ಶಿಕ್ಷಣವನ್ನು ಹೊಂದಿರುವ ಈ ಸಂಸ್ಥೆಗೆ ನೇಮಕಾತಿ ಪ್ರಕ್ರಿಯೆ ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಹಾಗಾಗಿ ಬಿಎಂಎಸ್ ಶಿಕ್ಷಣ ದತ್ತಿಯಲ್ಲಿ ಇರುವ ಸರಕಾರದ ನಾಮನಿರ್ದೇಶಿತ ಟ್ರಸ್ಟಿಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಕೆಆರ್ ಸ್ ಪಕ್ಷ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News