ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಚಾಲನೆ
ಮಂಗಳೂರು, ಅ.18: ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವರು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 3090 ರನ್ವಯ ಪ್ರತಿಯೊಂದು ಗ್ರಾಮ ಪಂಚಾಯತ್ ಸಮರ್ಪಕವಾಗಿ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ ಎಂದರು.
ದೂರದೃಷ್ಟಿ ಯೋಜನೆ ಎಂದರೆ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿರುವ ಗುರಿಗಳನ್ನು ನಿಗದಿಪಡಿಸಿ ಅವುಗಳನ್ನು ಸಮುದಾಯ ಸಹಭಾಗಿತ್ವದೊಂದಿಗೆ ಯೋಜನೆ ಸಿದ್ಧಪಡಿಸುವುದು. ಗ್ರಾಮ ಪಂಚಾಯತಿಯ ವಾಸ್ತವ ಸ್ಥಿತಿ ಆಧರಿಸಿ 5 ವರ್ಷಗಳ ಅವಧಿಗೆ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ ಹಾಗೂ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಮತ್ತು ಲಭ್ಯ ಸಂಪನ್ಮೂಲಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಯೋಜನೆ ಸಿದ್ಧಪಡಿಸಬೇಕಾಗುತ್ತದೆ ಎಂದರು.
ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಪಂಚಾಯತಿಯ ತಂಡವನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸದಸ್ಯರುಗಳಿಗೆ ವಿವಿಧ ಹಂತದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಶಾಸಕರಾದ ಉಮನಾಥ್ ಕೋಟ್ಯಾನ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.