ಹಕ್ಕು ಪತ್ರ ವಿತರಣೆ ಮಾಡುವಂತೆ ಬಗರ್ ಹುಕುಂ ಸಾಗುವಳಿದಾರರ ಆಗ್ರಹ; ಫ್ರೀಡಂ ಪಾರ್ಕ್ ಮೈದಾನದಲ್ಲಿ ಪ್ರತಿಭಟನೆ

Update: 2022-10-18 12:53 GMT

ಬೆಂಗಳೂರು, ಅ.18: ಸರಕಾರ ತುರ್ತಾಗಿ ಹಕ್ಕುಪತ್ರ ವಿತರಣೆ ಮಾಡಬೇಕು. ಗುತ್ತಿಗೆ ಆಧಾರದಲ್ಲಿ ಜಮೀನು ಕೊಡುವ ರೈತ ವಿರೋಧಿ ನೀತಿಯನ್ನು ಕೈಬಿಡುವುದು ಸೇರಿದಂತೆ ನಾನಾ ಬೇಡಿಕೆಗಳಿಗಾಗಿ ಆಗ್ರಹಿಸಿ ಬಗರ್ ಹುಕುಂ ಸಾಗುವಳಿದಾರರು ವಿಧಾನಸೌಧ ಚಲೋ ನಡೆಸಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಅಖಿಲ ಭಾರತೀಯ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ಜಮಾಯಿಸಿದ ಸಾಗುವಳಿದಾರರು, ತಲೆತಲಾಂತರದಿಂದ ಉಳುಮೆ ಮಾಡುತ್ತಾ ಬದುಕು ಕಟ್ಟಿ ಕೊಂಡು ಬಂದ ರೈತರನ್ನು ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಂದಾಯ ಸಚಿವ ಆರ್ ಅಶೋಕ್ ಸ್ಥಳಕ್ಕಾಗಮಿಸಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಡರೈತರು ಭೂಮಿ ಕೇಳುವುದು ನೈತಿಕ ಹಕ್ಕು, ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಬಡ ರೈತರ ಪರವಾಗಿ ನಿಲ್ಲಬೇಕಾದುದು ಸರಕಾರದ ಜವಾಬ್ದಾರಿ ಎಂದು ಹೇಳಿದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ರೈತರು ಯಾವುದೇ ಲಾಭದಾಸೆಗಳಿಲ್ಲದೆ, ಹೊಟ್ಟೆಪಾಡಿಗಾಗಿ ಭೂಮಿ ಹಾಗೂ ಪ್ರಕೃತಿಯನ್ನು ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅವರು ಆಧುನಿಕ ಉಪಕರಣಗಳಿಲ್ಲದೆ, ಸರಕಾರದ ಬೆಂಬಲವಿಲ್ಲದೆ ಕೃಷಿ ಮಾಡುತ್ತಿರುವ ಕಾರಣ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘಟನೆ ಅಧ್ಯಕ್ಷ ಎಚ್.ವಿ. ದಿವಾಕರ್, ಕಳೆದ ಆರು ದಶಕಗಳಿಂದ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಾ ಬಂದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣ ಹಕ್ಕುಪತ್ರ ವಿತರಣೆ ಮಾಡಬೇಕು. ಅದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಕಡ್ಡಾಯವಾಗಿ ‘ಭೂ ಮಂಜೂರಾತಿ ಸಮಿತಿ' ರಚಿಸಬೇಕು ಎಂದು ಒತ್ತಾಯಿಸಿದರು.

ಸರಕಾರ ರೈತರ ಅಕ್ರಮ (ಒತ್ತುವರಿ) ಭೂಮಿಯನ್ನು ಸಕ್ರಮ ಮಾಡುವುದಾಗಿ ಹಲವಾರು ವರ್ಷಗಳಿಂದ ಹುಸಿ ಭರವಸೆ ನೀಡುತ್ತಾ ಬಂದಿವೆಯೇ ಹೊರತು, ರೈತರಿಗೆ ಅನುಕೂಲ ಮಾಡುತ್ತಿಲ್ಲ. ಹಾಗಾಗಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಬೇಕು. ಅದರಿಂದ ರೈತರು ಕೃಷಿ ಸಾಲ ಸೌಲಭ್ಯ ಪಡೆಯಲು ಹಾಗೂ ಉಳುವವನಿಗೆ ಸ್ವಂತ ಭೂಮಿ ದಕ್ಕಿದಂತಾಗುತ್ತದೆ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಸಂಘಟನೆಯ ಅಖಿಲ ಭಾರತ ಸಮಿತಿಯ ಉಪಾಧ್ಯಕ್ಷ ಟಿ.ಎಸ್.ಸುನೀತ್ ಕುಮಾರ್, ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್ ಸೇರಿದಂತೆ ಪ್ರಮುಖರಿದ್ದರು.

► ಹೋರಾಟಗಾರರಿಗೆ ಸರಕಾರ ಭರವಸೆ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಖಾತೆ ಮಾಡಿಕೊಡುವುದು, ರೈತರ ಮೇಲಿನ ಭೂಕಬಳಿಕೆ ಕೇಸುಗಳನ್ನು ವಾಪಸ್ ತೆಗೆದುಕೊಳ್ಳುವುದು ಹಾಗೂ ಇನ್ನಿತರ ಹಕ್ಕೊತ್ತಾಯಗಳನ್ನು ಸಂಬಂಧಪಟ್ಟ ಸಚಿವರೊಂದಿಗೆ ಸಭೆ ನಡೆಸಿ ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಹೋರಾಟಗಾರರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News