ಬೆಂಗಳೂರು | ರಸ್ತೆ ರಸ್ತೆಗುಂಡಿಯಿಂದ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃತ್ಯು

Update: 2022-10-18 14:03 GMT
(ಎಂಜಿ ರಸ್ತೆಯಲ್ಲಿರುವ ಗುಂಡಿಯನ್ನು ಕಲ್ಲುಗಳಿಂದ ಮುಚ್ಚುತ್ತಿರುವ ಪೊಲೀಸ್ ಸಿಬ್ಬಂದಿ)

ಬೆಂಗಳೂರು, ಅ.18: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಉಮಾದೇವಿ(52)ಅವರು ತಡರಾತ್ರಿ ಮೃತಪಟ್ಟಿದ್ದಾರೆ.

ಪುತ್ರಿ ವನಿತಾ ಅವರೊಂದಿಗೆ ಉಮಾ ಸ್ಕೂಟಿಯಲ್ಲಿ ಸೋಮವಾರ ಬೆಳಗ್ಗೆ ಸಾಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ, ಗಂಭೀರ ಸ್ಥಿತಿಗೆ ತಲುಪಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಉಮಾದೇವಿ ಸಾವನ್ನಪ್ಪಿದ್ದಾರೆ. 

ಈ ಸಂಬಂಧ ಪುತ್ರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ ಮಲ್ಲೇಶ್ವರ ಸಂಚಾರ ಪೊಲೀಸರು, ಕೆಎಸ್ಸಾರ್ಟಿಸಿ ಬಸ್ ಚಾಲಕ ಮಾರುತಿ ಎಂಬುವರನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಉಮಾದೇವಿ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. 

ವಸಂತನಗರದ ಉಮಾದೇವಿ, ಹೋಂ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ರವಿವಾರ ಶ್ರೀನಗರದ ಪುತ್ರಿಯ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಪುತ್ರಿಯ ಮನೆಯಿಂದ ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ರಾಜಾಜಿನಗರದ ಲುಲು ಗ್ಲೋಬಲ್ ಮಾಲ್ ಬಳಿ ಗುಂಡಿ ತಪ್ಪಿಸಲು ವನಿತಾ ವಾಹನವನ್ನು ಬಲಭಾಗಕ್ಕೆ ಚಲಾಯಿಸಿದರು.

ಆಗ ಹಿಂದಿಯಿಂದ ಬಂದ ಕೆಎಸ್ಸಾರ್ಟಿಸಿ ಬಸ್ ಸ್ಕೂಟಿಗೆ ಢಿಕ್ಕಿ ಹೊಡೆಯಿತು. ಕೆಳಕ್ಕೆ ಬಿದ್ದ ಉಮಾದೇವಿ ಮೇಲೆ ಬಸ್ ಹರಿಯಿತು. ಬಳಿಕ ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಿದರೂ, ತಡರಾತ್ರಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News