ಒಂದು ಟ್ರಿಲಿಯನ್ ಆರ್ಥಿಕತೆ ಸಾಧಿಸಲು ಕ್ರಿಯಾಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-18 17:34 GMT

ಬೆಂಗಳೂರು, ಅ.18: ರಾಜ್ಯವು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನ ಮಾಡಲು ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಯೋಜನಾ ಇಲಾಖೆಯ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22ರ ಆಧಾರದ ಮೇಲೆ ಹೆಚ್ಚಿನ ವಿಶ್ಲೇಷಣೆಯೊಂದಿಗೆ ಆರ್ಥಿಕ ತಜ್ಞ ಮೋಹನ್ ದಾಸ್ ಪೈ ಹಾಗೂ ನಿಶಾ ಹೊಳ್ಳ ತಯಾರಿಸಿರುವ ‘ಕರ್ನಾಟಕ ಎ ಒನ್ ಟ್ರಿಲಿಯನ್ ಜಿಡಿಪಿ ವಿಷನ್’ ಎಂಬ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜ್ಯದ ಪ್ರಗತಿಯ ನಿಯಮಿತ ಪರಿಶೀಲನೆ ನಡೆಸಲಿರುವ ಈ ಸಮಿತಿಯಲ್ಲಿ ಮುಖ್ಯ ಕಾರ್ಯದರ್ಶಿ, ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಮೋಹನ್ ದಾಸ್ ಪೈ, ಎಫ್‍ಐಸಿಸಿ ಹಾಗೂ ಮೆಕೆನ್ಸಿಯ ಪ್ರತಿನಿಧಿಗಳು ಇರುತ್ತಾರೆ. ಫಲಿತಾಂಶ ಆಧಾರಿತ ಉದ್ದೇಶಿತ ಬಜೆಟ್‍ಗೆ ಅನುಕೂಲವಾಗುವಂತೆ ಡಿಸೆಂಬರ್ ರೊಳಗೆ ಕ್ರಿಯಾಯೋಜನೆ ಸಿದ್ಧವಾಗಲಿದೆ. ಕರ್ನಾಟಕದಿಂದ ಒಂದು ಟ್ರಿಲಿಯನ್ ಯುಎಸ್ ಡಾಲರ್ ಕೊಡುಗೆಯೊಂದಿಗೆ 5 ಟ್ರಿಲಿಯನ್ ಭಾರತದ ಗುರಿಯೊಂದಿಗೆ ನಾವು ಹೊಂದಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಬೆಳವಣಿಗೆಯ ದರಗಳನ್ನು ಹೆಚ್ಚಿಸಲು ಮಂಗಳೂರು ಬಂದರು ವಿಸ್ತರಣೆಗಾಗಿ ಅಗಾಧ ಸಂಭಾವ್ಯತೆಯನ್ನು ಪರಿಗಣಿಸಿ ಕರಾವಳಿ ಕಾರಿಡಾರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಮೂಲಕ ರಫ್ತನ್ನು ಹೆಚ್ಚಿಸುವುದು. ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮೂಲಸೌಕರ್ಯ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ. ಅಭಿವೃದ್ಧಿಯನ್ನು ಉತ್ತೇಜಿಸಲು ಜನರ ಆರ್ಥಿಕ ಸಾಮರ್ಥ್ಯಗಳನ್ನು ಹೆಚ್ಚಿಸಬೇಕು. ಕೈಗಾರಿಕಾ, ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಕೈಗಾರಿಕಾ ವಲಯದ ಸಾಮಥ್ರ್ಯವನ್ನು ಹೆಚ್ಚಿಸುವುದರ ಮೂಲಕ ಕೃಷಿ ಮತ್ತು ಸೇವಾ ವಲಯದ ಬೆಳವಣಿಗೆಯನ್ನು ಕಾಣಬಹುದು ಎಂದು ಅವರು ಹೇಳಿದರು. 

ತಜ್ಞರು ನೀಡಿರುವ 9 ಆರ್ಥಿಕ ಕಾರ್ಯತಂತ್ರಗಳು: 1.ಕೃಷಿವಲಯವನ್ನು ತಂತ್ರಜ್ಞಾನ, ಬ್ರ್ಯಾಂಡಿಂಗ್, ಮಾರುಕಟ್ಟೆ ಮತ್ತು ರಪ್ತು ಮೂಲಕ ಉತ್ತೇಜಿಸುವುದು.

2. ಕಾರ್ಮಿಕ ಆಧಾರಿತ ಕೈಗಾರಿಕೆಗಳ ಮೂಲಕ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವುದು.

3.ಮೂಲಭೂತ ಸೌಕರ್ಯಗಳಿಗೆ ವೆಚ್ಚವನ್ನು ಹೆಚ್ಚಿಸುವ ಮೂಲಕ ನಿರ್ಮಾಣ ವಲಯದ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು.

4.ಬೆಂಗಳೂರು ಹೊರತುಪಡಿಸಿ-200ಸಣ್ಣಪಟ್ಟಣಗಳಲ್ಲಿ ವ್ಯವಸ್ಥಿತ ನಗರೀಕರಣ.

5. ನೀತಿ ಆಯೋಗದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ವಿಸ್ತರಿಸುವುದು.

6. ಉತ್ಪಾದನೆ ಮತ್ತು ರಫ್ತು ಕೈಗಾರಿಕೆಗಳ ಮೌಲ್ಯವರ್ಧನೆಯನ್ನು ಹೆಚ್ಚಿಸಲು ವಿಶೇಷವಾದ ಹೈಟೆಕ್ ಉದ್ಯಮಗಳ ಸೃಜನೆ.

7. ಬೆಂಗಳೂರು ಜಾಗತಿಕ ನಗರವಾಗಿ ರೂಪುಗೊಳ್ಳಲು ಹೆಚ್ಚಿನ ಹೂಡಿಕೆ ಮಾಡುವುದು.

8.ಫೀಡ್ ಫಾರ್ವರ್ಡ್ ಸಾಮರ್ಥ್ಯಗಳು ಮತ್ತು ಬೆಳವಣಿಗೆಯ ಚಾಲಕಗಳನ್ನು (Growth Drivers)) ನಿರ್ಮಿಸಲು ಮಾಹಿತಿ ತಂತ್ರಜ್ಞಾನ ಸೇವಾವಲಯವನ್ನು ತ್ವರಿತಗೊಳಿಸುವುದು ಹಾಗೂ ನವೋದ್ಯಮಗಳ ಇಕೋಸಿಸ್ಟಮ್ ಅನ್ನು ಬಲಪಡಿಸಲು ಹೂಡಿಕೆ ಮಾಡುವುದು.

ಈ ಸಂದರ್ಭದಲ್ಲಿ ಐಟಿ ಉದ್ಯಮಿ ಟಿ.ವಿ.ಮೋಹನ್ ದಾಸ್ ಪೈ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಯೋಜನೆ ಮತ್ತು ಸಾಂಖಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಹಾಗೂ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News