ಬೆಂಗಳೂರು: ನಗರದಲ್ಲಿ ಮುಂದುವರಿದ ಮಳೆ, ಕೆಲವು ಬಡಾವಣೆಗಳು ಜಲಾವೃತ

Update: 2022-10-18 15:22 GMT

ಬೆಂಗಳೂರು, ಅ. 18: ನಗರದಲ್ಲಿ ಎರಡು ದಿನಗಳಿಂದ ಸಾಧರಣ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರೆದಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ನಗರದಲ್ಲಿ ಮಳೆಯಾಗಿದೆ. ನಗರದ ಕೆಲ ಬಡಾವಣೆಗಳು ಎಂದಿನಂತೆ ಜಲಾವೃತಗೊಂಡಿದ್ದು, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ, ರಸ್ತೆಯಲ್ಲೇ ನೀರು ತುಂಬಿದ್ದವು.  

ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಜಯನಗರ, ಗಾಂಧಿ ಬಜಾರ್, ಜೆಪಿ ನಗರ ಸೇರಿ ಹಲವು ಪ್ರದೇಶಗಳಲ್ಲಿ ಸಾಧರಣ ಮಳೆಯಾಗಿದ್ದು, ರಸ್ತೆಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಮಳೆಗೆ ಕೆರೆಗಳಾಗಿ ಮಾರ್ಪಟ್ಟಿದ್ದವು. ಬನ್ನೇರುಘಟ್ಟ ಮುಖ್ಯ ರಸ್ತೆಯ ಕೆಲ ಬಡಾವಣೆಗಳು, ಮಹದೇವಾಪುರ ಹಾಗೂ ಬೆಳ್ಳಂದೂರಿನ ಕೆಲ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿದ್ದವು.

ರಾಜಕಾಲುವೆಗಳ ಒತ್ತುವರಿ ಮಾಡಿಕೊಂಡು ಮನೆಗಳ ನಿರ್ಮಾಣ ಮಾಡಿಕೊಂಡಿದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗಿದ ದೃಷ್ಯಗಳು ಕಂಡು ಬಂದಿತು. ನಗರದಲ್ಲಿ ಪ್ರತಿದಿನ ಸುರಿಯುತ್ತಿರುವ ಮಳೆ ಎಲ್ಲ ವರ್ಷದ ದಾಖಲೆಗಳನ್ನು ಅಳಿಸಿ ಹಾಕಿದೆ. ಈ ವರ್ಷದಲ್ಲಿ ಇಲ್ಲಿಯ ತನಕ ನಗರದಲ್ಲಿ 170.6 ಸೆಂಟಿಮೀಟರ್ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News