ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೆರವು; ಕೇಂದ್ರಕ್ಕೆ ನಿಯೋಗ ಕರೆದೊಯ್ಯಲು ನಿರ್ಧಾರ: ಶಾಸಕ ಹರತಾಳು ಹಾಲಪ್ಪ

Update: 2022-10-18 16:30 GMT

ಬೆಂಗಳೂರು, ಅ.18: ಶಿವಮೊಗ್ಗ ಜಿಲ್ಲೆಯ ಶರಾವತಿ ಸಂತ್ರಸ್ತರಿಗೆ ಅನುಕೂಲವಾಗುವಂತೆ ಸುಮಾರು 9 ಸಾವಿರ ಎಕರೆ ಜಮೀನನ್ನು ನೋಟಿಫಿಕೇಶನ್ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲು ಮುಖ್ಯಮಂತ್ರಿ ನೇತೃತ್ವದ ನಿಯೋಗ ಕೇಂದ್ರಕ್ಕೆ ಕರೆದೊಯ್ಯುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮಂಗಳವಾರ ವಿಕಾಸಸೌಧದಲ್ಲಿ ಈ ಕುರಿತಂತೆ ನಡೆದ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಜಿಲ್ಲೆಯ ಶರಾವತಿ ಸಂತ್ರಸ್ತರಿಗಾಗಿ ಅಂದು ಸುಮಾರು 6 ಸಾವಿರ ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಹೈಕೋರ್ಟ್ 1980ರ ಅರಣ್ಯ ಕಾಯ್ದೆಯಂತೆ ಕೇಂದ್ರ ಸರಕಾರದ ಪೂರ್ವನುಮತಿಯಿಲ್ಲದೇ ಜಮೀನು ನೋಟಿಫಿಕೇಶನ್ ಮಾಡಿ, ಮಂಜೂರು ಮಾಡಿರುವುದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತ್ತು ಎಂದರು.

ಹೈಕೋರ್ಟ್ ರದ್ದುಗೊಳಿಸಿರುವ ಎಲ್ಲ 57 ಸೂಚನೆಗಳನ್ನು ಕೇಂದ್ರ ಸರಕಾರದ ಅನುಮತಿಯೊಂದಿಗೆ ಊರ್ಜಿತಗೊಳಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರಕ್ಕೆ ನಿಯೋಗ ಕರೆದೊಯ್ದು ಅನುಷ್ಠಾನಗೊಳಿಸುವಂತೆ ಒತ್ತಡ ಹೇರಲಾಗುವುದು ಎಂದು ಹರತಾಳು ಹಾಲಪ್ಪ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ, ಸಾಂಖ್ಯಿಕ ಮತ್ತು ಯೋಜನಾ ಅಧಿಕಾರಿಗಳ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು, ಈಗಾಗಲೇ ನೋಟಿಫಿಕೇಶನ್ ಮಾಡಿರುವ ಆರು ಸಾವಿರ ಎಕರೆ ಜಮೀನಿಗೆ ಇನ್ನೂ ಮೂರು ಸಾವಿರ ಎಕರೆ ಅರಣ್ಯ ಭೂಮಿಯನ್ನು ಸೇರ್ಪಡೆಗೊಳಿಸುವಂತೆ ವರದಿಯಲ್ಲಿ ಪ್ರಸ್ತಾಪಿಸುವಂತೆ ಚರ್ಚಿಸಲಾಯಿತು ಎಂದು ಅವರು ಹೇಳಿದರು.

ಸಭೆಯಲ್ಲಿ  ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಡಿಸಿಎಫ್ ಸಂಜಯ್ ಬಿಜ್ನೂರ್, ಶರಾವತಿ ಮುಳುಗಡೆ ಪ್ರದೇಶದ ರೈತರಾದ ಕಾಳನಾಯ್ಕ, ತಿಮ್ಮಪ್ಪ ಕುಂಬ್ರಿ, ಕೃಷ್ಣಮೂರ್ತಿ, ಜಾನಪದ ಆಕಾಡೆಮಿ ಮಾಜಿ ಸದಸ್ಯ ಬೂದ್ಯಪ್ಪ,   ಸೇರಿದಂತೆ ಮುಳಗಡೆ ರೈತ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News