ಜ.20ರಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ‘ಸಿರಿಧಾನ್ಯ ಮೇಳ': ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2022-10-19 12:57 GMT

ಬೆಂಗಳೂರು, ಅ. 19: ‘ರೈತರ ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿ, ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಬರುವ 2023ರ ಜ.20ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ' ಆಯೋಜಿಸಲಾಗುತ್ತಿದೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿರಿಧಾನ್ಯ ಬೆಳೆ ಬೆಳೆಯುವಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕ ಮಂಚೂಣಿಯಲ್ಲಿದ್ದು, ಇದಕ್ಕೆ ಸೂಕ್ತ ಮಾರುಕಟ್ಟೆ ವಿಸ್ತರಣೆ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವುದು ಸೇರಿದಂತೆ ಇನ್ನಿತರ ಸದುದ್ದೇಶಗಳಿಗಾಗಿ ಈ ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ' ಎಂದು ವಿವರಿಸಿದರು.

‘ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಕೇಂದ್ರ ಕೃಷಿ ಸಚಿವ ಮಹೇಂದ್ರ ಸಿಂಗ್ ತೋಮರ್ ಅವರು ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಆಗಮಿಸಿದರೆ ಹೆಚ್ಚಿನ ಪ್ರಚಾರ ಸಿಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಪ್ರಧಾನಿ ಆಹ್ವಾನಿಸುವ ಕುರಿತು ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ' ಎಂದು ಪಾಟೀಲ್ ಹೇಳಿದರು.

‘ಸಿರಿಧಾನ್ಯ ಮೇಳದಲ್ಲಿ ಪ್ರತಿದಿನ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ರೈತರು ಭಾಗಿಯಾಗುವ ಸಾಧ್ಯತೆ ಇದ್ದು, ಕೃಷಿ ವಿಶ್ವ ವಿದ್ಯಾಲಯಗಳ ಕುಲಪತಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಮಾದರಿ ರೈತರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಲ್ಲದೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಪೂರಕ ರೈತಪಯೋಗಿ ಹಲವಾರು ಯೋಜನೆಗಳನ್ನು ಘೋಷಿಸಿದೆ.

ಆಹಾರ ಉತ್ಪಾದನೆಯಲ್ಲಿ ಸಮಸ್ಯೆ ಇಲ್ಲ: ‘ಪ್ರಸಕ್ತ ವರ್ಷ ಮುಂಗಾರುವಿನಲ್ಲಿ 82.67ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಇದರಲ್ಲಿ 80.40ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗುರಿ ಸಾಧಿಸಿದ್ದೇವೆ. ಹಿಂಗಾರಿನಲ್ಲಿ 26.68ಲಕ್ಷ ಹೆಕ್ಟೇರ್ ಪೂಕಿ 2.25 ಲಕ್ಷ ಹೆಕ್ಟೇರ್ ಗುರಿ ಸಾಧಿಸಲಾಗಿದೆ. ವ್ಯಾಪಕವಾಗಿ ಮಳೆಯಾಗಿದ್ದರೂ ಆಹಾರ ಉತ್ಪಾದನೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

28.57ಕೋಟಿ ರೂ.ಮೌಲ್ಯದ ಕೃಷಿ ಪರಿಕರಗಳ ಜಪ್ತಿ: ಮೂರು ವರ್ಷಗಳಲ್ಲಿ 28.57ಕೋಟಿ ರೂ.ಮೌಲ್ಯದ ನಕಲಿ ಕೃಷಿ ಪರಿಕರಗಳನ್ನು ಜಪ್ತಿ ಮಾಡಲಾಗಿದೆ' ಎಂದು ಬಿ.ಸಿ.ಪಾಟೀಲ್, ‘ವಿಶ್ವಸಂಸ್ಥೆಯು 2023ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಅಲ್ಲದೆ, ಕರ್ನಾಟಕ ಕೃಷಿ ಇಲಾಖೆಯು ಕೇಂದ್ರದಿಂದ ಕೃಷಿ ಇಲಾಖೆಯ ಸಾಧನೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದೆ' ಎಂದು ತಿಳಿಸಿದರು.

--------------------------------
‘ಭೀಮಾ ಪಲ್ಸ್ ಬ್ರ್ಯಾಂಡ್' ಲೋಕಾರ್ಪಣೆ: ‘ಭೌಗೋಳಿಕ ಸೂಚ್ಯಂಕ ಪಡೆದಿರುವ ಗುಲ್ಬರ್ಗ ತೋಗರಿ ಬೇಳೆಗೆ ‘ಭೀಮಾ ಪಲ್ಸ್ ಬ್ರ್ಯಾಂಡ್'ನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಪೌಷ್ಠಿಕತೆಯನ್ನು ಹೊಂದಿರುವ ಗುಲ್ಬರ್ಗ ತೋಗರಿ ಬೇಳೆ ಉತ್ಕøಷ್ಟ ಒಳ್ಳೆಯ ಸುವಾಸನೆ ಮತ್ತು ರುಚಿಕರವಾಗಿರುತ್ತದೆ. ಈ ತೊಗರಿಯಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಹೇರಳವಾಗಿರುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದ್ದು, ಜನರು ಭೀಮಾ ಪಲ್ಸ್ ಬ್ರ್ಯಾಂಡ್' ತೊಗರಿ ಬೇಳೆ ಬಳಸಬೇಕು'

-ಬಿ.ಸಿ.ಪಾಟೀಲ್ ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News