ಬೆಂಗಳೂರಲ್ಲಿ ಮತ್ತೆ ಮಹಾ ಮಳೆ: ಜನಜೀವನ ಅಸ್ತವ್ಯಸ್ತ

Update: 2022-10-20 05:27 GMT

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬುಧವಾರ ರಾತ್ರಿ ಕೂಡಾ ವ್ಯಾಪಕ ಮಳೆಯಾಗಿದ್ದು, ಐಟಿ ವಲಯ ಬೆಳ್ಳಂದೂರು ಸೇರಿದಂತೆ ಬೆಂಗಳೂರಿನ ಪೂರ್ವ, ದಕ್ಷಿಣ ಮತ್ತು ಕೇಂದ್ರ ಪ್ರದೇಶಗಳಲ್ಲಿ ಹಲವು ರಸ್ತೆಗಳು ಮುಳುಗಿವೆ.

ಬೆಂಗಳೂರಿನ ಉತ್ತರ ಭಾಗದ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಬುಧವಾರ ಸಂಜೆ 59 ಮಿಲಿಮೀಟರ್ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳವರೆಗೆ ರಾಜಧಾನಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾತ್ರಿ 7.30ರ ಸುಮಾರಿಗೆ ಭಾರಿ ಮಳೆ ಆರಂಭವಾಗಿದ್ದು, ಜಲಾವೃತ ರಸ್ತೆಗಳು, ತೆರೆದ ಮ್ಯಾನ್‍ಹೋಲ್‍ಗಳ ಮೇಲೆ ನೀರು ಹರಿಯುತ್ತಿರುವುದು, ಬೇಸ್‍ಮೆಂಟ್ ಪಾರ್ಕಿಂಗ್ ಸ್ಥಳಗಳು ಜಲಾವೃತವಾಗಿರುವುದು, ವಾಹನಗಳು ಹಾಳಾಗಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕಚೇರಿ ಕೆಲಸ ಮುಗಿಸಿ ಮನೆಗಳಿಗೆ ಹೊರಟಿದ್ದವರು ಮಳೆಯ ಅಬ್ಬರಕ್ಕೆ ಮೆಟ್ರೊ ನಿಲ್ದಾಣಗಳಲ್ಲೇ ಆಶ್ರಯ ಪಡೆಯಬೇಕಾಯಿತು.

ಕಳೆದ ತಿಂಗಳು ಕೂಡಾ ಮಳೆಯ ಆವಾಂತರದಲ್ಲಿ ರಾಜಧಾನಿ ಕಂಗೆಟ್ಟಿತ್ತು. ಜಾಗತಿಕ ಐಟಿ ಕಂಪನಿಗಳು ಮತ್ತು ಸ್ಟಾರ್ಟಪ್‍ಗಳು ಇರುವ ಪ್ರದೇಶಗಳು ಜಲಾವೃತಗೊಂಡು, ಪ್ರವಾಹ ಇಳಿಯಲು ಹಲವು ದಿನಗಳೇ ಬೇಕಾಗಿದ್ದವು. ಸುತ್ತಮುತ್ತಲಿನ ವಸತಿ ಪ್ರದೇಶಗಳು, ರಸ್ತೆಗಳು ಹಾನಿಗೀಡಾಗಿದ್ದು, ನೀರು ಹಾಗೂ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿತ್ತು. ಐಷಾರಾಮಿ ವಸತಿ ಕಾಲನಿಗಳ ನಿವಾಸಿಗಳ ರಕ್ಷಣೆಗಾಗಿ ಟ್ರ್ಯಾಕ್ಟರ್‍ಗಳನ್ನು ಸೇವೆಗೆ ಇಳಿಸಬೇಕಾಯಿತು ಎಂದು ಈ ಬಗ್ಗೆ ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News