ರಸ್ತೆಗುಂಡಿ ಮುಚ್ಚದಿದ್ದರೆ, ಅಮಾನತ್ತು: ಅಧಿಕಾರಿಗಳಿಗೆ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ

Update: 2022-10-20 16:19 GMT
(ಎಂಜಿ ರಸ್ತೆಯಲ್ಲಿರುವ ಗುಂಡಿಯನ್ನು ಕಲ್ಲುಗಳಿಂದ ಮುಚ್ಚುತ್ತಿರುವ ಪೊಲೀಸ್ ಸಿಬ್ಬಂದಿ)

ಬೆಂಗಳೂರು, ಅ. 20: ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.    

ಗುರುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಪರಿಶೀಲನೆಯ ವೇಳೆ ರಸ್ತೆಗುಂಡಿಗಳು ಕಂಡುಬಂದರೆ ಅದನ್ನು ಮುಚ್ಚಿದ ವಿಡಿಯೋವನ್ನು ಕಳುಹಿಸಿಕೊಡುವಂತೆ ತಿಳಿಸಲಾಗಿದೆ. ಆದರೂ ಗುಂಡಿಗಳನ್ನು ಮುಚ್ಚದಿದ್ದರೆ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಇದುವರೆಗೂ ರಸ್ತೆಗುಂಡಿ ಮುಚ್ಚುವ ಕುರಿತಾಗಿ ಯಾವುದೇ ಅಧಿಕಾರಿಯನ್ನು ಅಮಾನತ್ತು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ನಗರದಲ್ಲಿ ರಸ್ತೆ ಬದಿಯ ಚರಂಡಿಗಳ ಸಂಪರ್ಕ ಸರಿಯಾಗಿಲ್ಲದಿರುವ ಕಾರಣ ಮಳೆ ಬಂದರೆ ನೀರು ರಸ್ತೆಗಳ ಮೇಲೆ ನೀರು ನಿಲ್ಲುತ್ತಿದೆ. ಹಾಗಾಗಿ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದರು.

ಖಾಲಿ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಕಸದ ರಾಶಿ ಬಿದ್ದಿದ್ದು, ಪಾಲಿಕೆಯಿಂದ ಸ್ವಚ್ಛಗೊಳಿಸಿ ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಬೇಕು. ಹಾಗಯೇ ಪಾದಚಾರಿ ಮಾರ್ಗಗಳಲ್ಲಿ ಕಟ್ಟಡ ತಾಜ್ಯಗಳನ್ನು ಹಾಕಿದ್ದರೆ, ಅದನ್ನು ತೆಗೆಯಬೇಕು. ಮುಖ್ಯ ರಸ್ತೆಗಳ ಬೀದಿ ಬದಿ ವ್ಯಾಪಾರಿಗಳನ್ನು ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸಬೇಕು ಎಂದು  ಅಧಿಕಾರಿಗಳಿಗೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News