ಮುಸ್ಲಿಮರ ಮೀಸಲಾತಿ ಪ್ರಮಾಣ ಶೇ.8ಕ್ಕೆ ಹೆಚ್ಚಿಸಲು ನಸೀರ್ ಅಹ್ಮದ್ ಆಗ್ರಹ

Update: 2022-10-20 16:28 GMT
Photo- [ನಸೀರ್ ಅಹ್ಮದ್ -ವಿಧಾನಪರಿಷತ್ ಸದಸ್ಯ]

ಬೆಂಗಳೂರು, ಅ.20: ‘ಇಪ್ಪತ್ತು ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಮುಸ್ಲಿಮರಿಗೆ ಪ್ರವರ್ಗ 2(ಬಿ)ಅಡಿಯಲ್ಲಿ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 8ಕ್ಕೆ ಹೆಚ್ಚಳ ಮಾಡಬೇಕು' ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಆಗ್ರಹಿಸಿದ್ದಾರೆ.

ಗುರುವಾರ ನಗರದ ಸಾಲಾರ್ ಪಬ್ಲಿಕೇಷನ್ಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಮಿಲ್ಲರ್ ಆಯೋಗವನ್ನು ರಚಿಸಿದ್ದರು. ಆ ಆಯೋಗವು ಮುಸ್ಲಿಮರಿಗೆ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತ್ತು' ಎಂದರು.

‘ಆನಂತರ, 1972 ರಲ್ಲಿ ಎಲ್.ಜಿ.ಹಾವನೂರು ಆಯೋಗ, 1984ರಲ್ಲಿ ವೆಂಕಟಸ್ವಾಮಿ ಆಯೋಗ, 1990ರಲ್ಲಿ ಚಿನಪ್ಪ ರೆಡ್ಡಿ ಆಯೋಗ ಮತ್ತು 1992ರಲ್ಲಿ ಡಾ.ಕೆ.ರಹ್ಮಾನ್ ಖಾನ್ ನೇತೃತ್ವದ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಮುಸ್ಲಿಮರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.6ರಷ್ಟು ಮೀಸಲಾತಿಯನ್ನು ನೀಡುವಂತೆ ಶಿಫಾರಸ್ಸು ಮಾಡಿತ್ತು' ಎಂದು ನಸೀರ್ ಅಹ್ಮದ್ ಹೇಳಿದರು.

2011ರ ಜನಗಣತಿ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.12.92ರಷ್ಟು(78,93,065) ರಷ್ಟಿದೆ. ಇತ್ತೀಚಿನ ದತ್ತಾಂಶ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.14.67ಕ್ಕೆ ಏರಿಕೆಯಾಗಿದೆ. ಈಗಿರುವ ಮೀಸಲಾತಿ ಪ್ರಮಾಣವು ಸಾಕಾಗುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಹೆಚ್ಚಿಸಬೇಕು ಎಂಬುದು ನಮ್ಮ ಪ್ರಬಲ ಆಗ್ರಹವಾಗಿದೆ. ಈ ಸಂಬಂಧ ಶೀಘ್ರವೆ ಮುಸ್ಲಿಮ್ ಮುಖಂಡರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದರು.

ಎಸ್ಸಿ, ಎಸ್ಟಿ ಸಮುದಾಯಗಳಿಗೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಅದೇ ರೀತಿ, ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆ ಕುರಿತು ಸಾಚಾರ್ ವರದಿಯಲ್ಲಿ ಉಲ್ಲೇಖಿಸಿರುವಂತೆ ಎಸ್ಸಿ, ಎಸ್ಟಿ ಸಮುದಾಯಗಳಿಗಿಂತ ನಿಕೃಷ್ಟ ಪರಿಸ್ಥಿತಿಯಲ್ಲಿ ಮುಸ್ಲಿಮರಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಮೀಸಲಾತಿಯನ್ನು ಹೆಚ್ಚಳ ಮಾಡಲೇಬೇಕು ಎಂದು ನಸೀರ್ ಅಹ್ಮದ್  ತಿಳಿಸಿದರು.

ರಾಜ್ಯ ಸರಕಾರವು ನಮ್ಮ ನ್ಯಾಯ ಸಮ್ಮತವಾದ ಬೇಡಿಕೆಯನ್ನು ಈಡೇರಿಸದಿದ್ದರೆ, ಪ್ರಜಾಸತ್ತಾತ್ಮಕ ಮಾರ್ಗದ ಮೂಲಕ ಮೂಲಕ ನಾವು ಸ್ವಾತಂತ್ರ್ಯ ಉದ್ಯಾನವನದಲ್ಲಿ, ಜಿಲ್ಲಾ  ಹಾಗೂ ತಾಲೂಕು ಕೇಂದ್ರಗಳಲ್ಲಿ, ಇತರ ಸಮುದಾಯಗಳ ಬೆಂಬಲದೊಂದಿಗೆ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News