ಪರೀಕ್ಷೆ ಚೀಟಿಯನ್ನು ಪ್ರೇಮ ಪತ್ರವೆಂದು ತಪ್ಪಾಗಿ ಭಾವಿಸಿ ಬಾಲಕನನ್ನು ಹತ್ಯೆಗೈದ ಬಾಲಕಿಯ ಸಹೋದರರು

Update: 2022-10-20 17:28 GMT
PHOTO: PTI

ಪಾಟ್ನಾ (ಬಿಹಾರ್),ಅ. 20: ಪರೀಕ್ಷೆ ಕೊಠಡಿಯಲ್ಲಿ ಎಸೆದ ಚೀಟಿಯನ್ನು ಪ್ರೇಮ ಪತ್ರವೆಂದು ತಪ್ಪಾಗಿ ಭಾವಿಸಿ ಬಾಲಕಿಯ ಸಹೋದರು ಸೇರಿದಂತೆ  ಬಾಲಕರ ತಂಡವೊಂದು 12 ವರ್ಷದ ಬಾಲಕನನ್ನು ಕೊಚ್ಚಿ ಕೊಂದ ಆಘಾತಕಾರಿ ಘಟನೆ ಭೋಜಪುರದಲ್ಲಿ ಕಳೆದ ವಾರ ಸಂಭವಿಸಿದೆ.

ಮಹತ್‌ಬಾನಿಯ ಹಾಲ್ಟ್ ಸ್ಟೇಷನ್‌ನ ಸಮೀಪದ ರೈಲ್ವೆ ಹಳೆಯ ಸಮೀಪ ಬಾಲಕನ ಮೃತದೇಹದ ಚದುರಿ ಬಿದ್ದ ಭಾಗಗಳನ್ನು ಪೊಲೀಸರು ಸೋಮವಾರ ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಸಹೋದರರು ಹಾಗೂ ಆತನ ಗೆಳೆಯರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ. ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ನೆರವನ್ನು ಕೂಡ ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ. ಬಾಲಕನ ಶಿರಚ್ಛೇದನ ಮಾಡಲಾಗಿದೆ. ಕೈ ಹಾಗೂ ಕಾಲುಗಳನ್ನು ಕೂಡ ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಪರೀಕ್ಷಾ ಕೊಠಡಿಯಲ್ಲಿ ಮಧ್ಯಾವಧಿ ಪರೀಕ್ಷೆ ನಡೆಯುತ್ತಿದ್ಧ ಈ ಸಂದರ್ಭ 5ನೇ ತರಗತಿ ವಿದ್ಯಾರ್ಥಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ತನ್ನ ಅಕ್ಕನಿಗೆ ಚೀಟಿ ಎಸೆದಿದ್ದ. ಅದು ಗುರಿ ತಪ್ಪಿ ಇನ್ನೋರ್ವ ಬಾಲಕಿಗೆ ತಾಗಿತ್ತು. ಆ ಬಾಲಕಿ ಚೀಟಿಯನ್ನು ಪ್ರೇಮ ಪತ್ರವೆಂದು ಭಾವಿಸಿ ತನ್ನ ಸಹೋದರರಿಗೆ ತಿಳಿಸಿದ್ದಳು. ಅನಂತರ ಆಕೆಯ ಸಹೋದರರು ಹಾಗೂ ಆತನ ಗೆಳೆಯರು ಬಾಲಕನಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ಅಕ್ಕ ಮನೆಗೆ ತಲುಪಿ ಘಟನೆ ಕುರಿತು ಹೆತ್ತವರಿಗೆ ತಿಳಿಸಿದ್ದಳು.  ಬಾಲಕನ ತಂದೆ ಹಾಗೂ ಕುಟುಂಬದ ಇತರ ಸದಸ್ಯರು ಹುಡುಕಾಟ ಆರಂಭಿಸಿದ್ದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮಸ್ಥರು ಸೋಮವಾರ ಸ್ಥಳೀಯ ದೇವಾಲಯದ ಸಮೀಪ ಬಾಲಕನ ಕೈಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು ಹಾಗೂ ಬಾಲಕನ ನಾಪತ್ತೆಯಾದ ಮೃತದೇಹವನ್ನು ಪತ್ತೆ ಹಚ್ಚಲು ಶ್ವಾನಗಳ ತಂಡವನ್ನು ನಿಯೋಜಿಸಿದರು.  ಮೃತದೇಹ ಪತ್ತೆಯಾದ ಬಳಿಕ ಗುರುತು ಪತ್ತೆ ಹಚ್ಚಲು ಕುಟುಂಬದ ಸದಸ್ಯರಿಗೆ ಕರೆ ನೀಡಿದ್ದರು. ಕುಟುಂಬದ ಸದಸ್ಯರು ಅವರು ಬಟ್ಟೆಯನ್ನು ಗುರುತು ಹಿಡಿದ ಬಳಿಕ ಮೃತದೇಹ ನಾಪತ್ತೆಯಾದ ಬಾಲಕನದ್ದು ಎಂದು ಪೊಲೀಸರು ದೃಢಪಡಿಸಿದರು ಎಂದು ಪೊಲೀಸ್ ಸಹಾಯಕ ಅಧೀಕ್ಷಕ (ಎಸ್‌ಎಸ್‌ಪಿ) ಹಿಮಾಂಶು ಅವರು ತಿಳಿಸಿದ್ದಾರೆ.

ಪೊಲೀಸ್ ಉಪ ಅಧೀಕ್ಷಕ (ಡಿಎಸ್‌ಪಿ) ವಿನೋದ್ ಕುಮಾರ್ ಸಿಂಗ್ ಹಾಗೂ ಇತರ ಅಧಿಕಾರಿಗಳು ಬಾಲಕನ ಕುಟುಂಬವನ್ನು ಭೇಟಿಯಾಗಿ ಕೆಲವು ವಿವರಗಳನ್ನು ಕಲೆ ಹಾಕಿದ್ದಾರೆ.

ಬಾಲಕನನ್ನು ಹತ್ಯೆಗೈದ ಎಲ್ಲರೂ ಅಪ್ರಾಪ್ತರಾಗಿದ್ದಾರೆ. ಆದುದುರಿಂದ ಅವರನ್ನು ಬಾಲಾಪರಾಧಿ ಕೇಂದ್ರಕ್ಕೇ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News