ಮಹಾರಾಷ್ಟ್ರದಲ್ಲಿ ಸಿಬಿಐಗೆ ಮುಕ್ತವಾಗಿ ತನಿಖೆ ನಡೆಸಲು ಒಪ್ಪಿಗೆ ನೀಡಿದ ಏಕನಾಥ ಶಿಂಧೆ ಸರಕಾರ

Update: 2022-10-21 09:39 GMT
Eknath Shinde, Photo:PTI

ಮುಂಬೈ: ರಾಜ್ಯದಲ್ಲಿ ಪ್ರಕರಣಗಳ ತನಿಖೆಗೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಾಮಾನ್ಯ ಒಪ್ಪಿಗೆಯನ್ನು ವಾಪಸ್ ಪಡೆದಿರುವ ಹಿಂದಿನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರದ ನಿರ್ಧಾರವನ್ನು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರಕಾರವು ಹಿಂತೆಗೆದುಕೊಂಡಿದೆ.

ಏಕನಾಥ್ ಶಿಂಧೆ ಸರಕಾರವು ಕೇಂದ್ರ ತನಿಖಾ ಸಂಸ್ಥೆಗೆ(CBI) ರಾಜ್ಯದಲ್ಲಿ  ಮುಕ್ತವಾಗಿ ತನಿಖೆ ನಡೆಸಲು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಮರುಸ್ಥಾಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ವಾಪಸ್ ಪಡೆಯುವ ಎಂವಿಎ ಸರಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಗೃಹ ಇಲಾಖೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಅಧಿಕಾರಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದರಿಂದ ಇನ್ನು ಮುಂದೆ ಸಿಬಿಐಗೆ ರಾಜ್ಯ ಸರಕಾರದ ಅನುಮತಿ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ರಾಜಕೀಯ ಲಾಭಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಾದದ ಅಡಿಯಲ್ಲಿ ಅಕ್ಟೋಬರ್ 21, 2020 ರಂದು  ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರಕಾರವು ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News