ನಿಂದನೆ ಭಯಕ್ಕೆ ಡಿನೋಟಿಫಿಕೇಷನ್ ರದ್ದುಗೊಳಿಸಿದ ಸರಕಾರ: ಕಮರಿದ ಶರಾವತಿ ಸಂತ್ರಸ್ತರ ಭೂಹಕ್ಕಿನ ಕನಸು

Update: 2022-10-21 12:48 GMT

ಶಿವಮೊಗ್ಗ, ಅ.21: ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು ಕಮರಿ ಹೋಗಿದೆ. ನ್ಯಾಯಾಂಗ ನಿಂದನೆಯ ಭಯದಿಂದ ರಾಜ್ಯ ಸರಕಾರ ಡಿನೋಟಿಫಿಕೇಷನ್ ರದ್ದುಗೊಳಿಸಿದೆ.

ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿರುವ ಮುಳುಗಡೆ ಸಂತ್ರಸ್ತರನ್ನು ಸರಕಾರ ಮತ್ತೊಮ್ಮೆ ಅನಾಥರಾನ್ನಾಗಿಸಿದೆ. ಸಾಗರ,ಹೊಸನಗರ ತಾಲೂಕಿನ 166 ಗ್ರಾಮಗಳ 6,177 ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿದೆ.ಈ ಕುಟುಂಬಗಳಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಕಾಲದಿಂದ ಈವರೆಗೆ ಭೂಮಿ ಮಂಜೂರಾತಿ ಆಗಿಲ್ಲ.

ಅಂದಿನ ರಾಜ್ಯ ಸರಕಾರ 1962 ರಲ್ಲಿಯೇ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನು ಮಂಜೂರು ಮಾಡಿ ಆದೇಶಿಸಿತ್ತು. ಆ ಪ್ರಕಾರ, 1959ರಿಂದ 1964ರ ಅವಧಿಯಲ್ಲಿ ಅರಣ್ಯ ಇಲಾಖೆ ಶಿವಮೊಗ್ಗ ಜಿಲ್ಲೆಯ ಒಟ್ಟು 13,500 ಎಕರೆ ಭೂಮಿಯನ್ನು ಪುನರ್ವಸತಿಗಾಗಿ ಬಿಡುಗಡೆ ಮಾಡಿತ್ತು. ಆದರೆ, ಅಂದಿನಿಂದ ಈವರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಹಕ್ಕುದಾಖಲೆಗಳಲ್ಲಿ ಬದಲಾವಣೆ ಮಾಡದ ಪರಿಣಾಮ, ಆ ದಾಖಲಾತಿಗಳಲ್ಲಿ ಆ ಭೂಮಿ ಅರಣ್ಯ ಪ್ರದೇಶವೆಂದೇ ನಮೂದಾಗಿದೆ. 1980ರಲ್ಲಿ ಅರಣ್ಯ ರಕ್ಷಣೆ ಕಾಯ್ದೆ ಜಾರಿಗೆ ಬಂದ ಪರಿಣಾಮ, ಆ ಭೂಮಿ ಹಂಚಿಕೆ ನನೆಗುದಿಗೆ ಬಿದ್ದಿತ್ತು.

ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಶಿಕಾರಿಪುರ ತಾಲೂಕುಗಳಲ್ಲಿ ಸರಕಾರ ನೀಡಿದ ಭೂಮಿಯಲ್ಲಿ ನೆಲೆಕಂಡುಕೊಂಡಿರುವ ಆರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಕಳೆದ ಆರು ದಶಕದಿಂದಲೂ ಭೂಮಿ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇವೆ.

ಕಾಂಗ್ರೆಸ್ ಸರಕಾರ ಶರಾವತಿ ಮುಳುಗಡೆ ಸಂತ್ರಸ್ತರ ಒತ್ತಡಕ್ಕೆ ಮಣಿದು 2015 ರಿಂದ 2017ರ ಅವಧಿಯಲ್ಲಿ ಒಟ್ಟು 9,932 ಎಕರೆ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡಿತ್ತು.ಇದರಲ್ಲಿ ಎರಡು ಸಾವಿರ ಎಕರೆ ಭೂಮಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಮೂರೂವರೆ ಸಾವಿರ ಎಕರೆ ಭೂಮಿಗೆ ಹಕ್ಕು ಪತ್ರ ನೀಡಲು ಸಿದ್ಧವಾಗಿತ್ತು, ಉಳಿದ ಮೂರು ಸಾವಿರ ಎಕರೆ ಸರ್ವೇ ಕಾರ್ಯ ನಡೆಯುತ್ತಿತ್ತು.  ಆದರೆ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಶರಾವತಿ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲಾಗಿದೆ.ಅಲ್ಲದೇ ಸರಕಾರದ ಈ ನಡೆಯಿಂದ ಪರಿಸರ ಹಾನಿಯಾಗುತ್ತದೆ ಮತ್ತು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಾಗ ಕೇಂದ್ರ ಸರಕಾರದ ಅನುಮತಿ ಪಡೆಯಬೇಕು ಎಂದು ಪರಿಸರ ಹೋರಾಟಗಾರ ಗಿರೀಶ್ ಆಚಾರಿ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು.

 ಆ ಹಿನ್ನೆಲೆಯಲ್ಲಿ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಡಿನೋಟಿಫಿಕೇಷನ್ ಮಾಡುವಾಗ ಅರಣ್ಯ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.2015 ರಿಂದ 2017ರ ನಡುವಿನ ಡಿ ನೋಟಿಫಿಕೇಶನ್ ಅಲ್ಲದೆ, 1994, 2006, 2019ರ ಅವಧಿಯಲ್ಲಿ ಮಾಡಲಾಗಿದ್ದ ಆದೇಶಗಳನ್ನು ರದ್ದುಪಡಿಸಿ 2021ರ ಮಾರ್ಚ್ 4ರಂದು ಆದೇಶಿಸಿತ್ತು.

ಶರಾವತಿ ಮುಳುಗಡೆ ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿರುವುದು (ಫೈಲ್ ಚಿತ್ರ)

ನ್ಯಾಯಾಲಯಕ್ಕೆ ಮನವರಿಕೆ ಮಾಡದ ಸರಕಾರ:  ಆರು ದಶಕಗಳ ಸಮಸ್ಯೆ ಅಂತ್ಯ ಹಾಡಬೇಕಾದ ಸರಕಾರ ವಿಫಲವಾಗಿದೆ. ನ್ಯಾಯಾಲಯಕ್ಕೆ ಶರಾವತಿ ಸಂತ್ರಸ್ತರ ನೈಜ ಪರಿಸ್ಥಿತಿ ಮತ್ತು ಆ ಭೂಮಿಯನ್ನು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಮುನ್ನವೇ ಅರಣ್ಯದಿಂದ ಬಿಡುಗಡೆ ಮಾಡಲಾಗಿತ್ತು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ.ರಾಜ್ಯ ಸರಕಾರದ ಈ ಲೋಪದಿಂದಾಗಿ ಸಂತ್ರಸ್ತರ ಬದುಕು ಅತಂತ್ರವಾಗಿದೆ.

ಸರಕಾರದ ಯೋಜನೆಗಳಿಂದ ನಿರಾಶ್ರಿತರಾದವರ ಪುನರ್ವಸತಿಗಾಗಿ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಕರ್ನಾಟಕ ಅರಣ್ಯ ಕಾಯ್ದೆ 1963ರ 28ನೇ ನಿಯಮದ ಅನ್ವಯ ದತ್ತವಾದ ಅಧಿಕಾರ ಚಲಾಯಿಸಿ, ರಾಜ್ಯ ಸರಕಾರ ಆರಣ್ಯ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿತ್ತು. ಹೈಕೋರ್ಟ್ ಆದೇಶ ಪಾಲನೆಯ ಭಾಗವಾಗಿ ಕಳೆದ ಸಪ್ಟಂಬರ್ 28ರಂದು ಆದೇಶ ಸಂಖ್ಯೆ ಎಫ್ಇಇ 70 ಎಫ್ಜಿಎಲ್ 2019 ಒಟ್ಟು 56 ಡಿ-ನೋಟಿಫಿಕೇಶನ್ ಆದೇಶಗಳನ್ನು ರದ್ದುಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಕಾನೂನು ಹೋರಾಟಕ್ಕೆ ಸಿದ್ಧವಾದ ಸಂತ್ರಸ್ತರು: ಸರಕಾರದ ಕಣ್ಣೊರೆಸುವ ತಂತ್ರಕ್ಕೆ ವಿರುದ್ಧವಾಗಿ ಶರಾವತಿ ಮುಳುಗಡೆ ಸಂತ್ರಸ್ತರು ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ.ಎಲ್ಲಾ ದಾಖಲಾತಿಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ. ಮುಳುಗಡೆ ಸಂತ್ರಸ್ತರಾದ ಕೆ.ಹೂವಪ್ಪ ,ನಾಗರಾಜ್ ಎಂ.ಡಿ,ಪ್ರಮೋದ್ ನೇತೃತ್ವದಲ್ಲಿ ಈಗಾಗಲೇ ಕಾನೂನು ಹೋರಾಟ ನಡೆಸಲು ಸಿದ್ದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

''ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವಲ್ಲಿ ಸರಕಾರ ವಿಫಲವಾಗಿದೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ 13,500 ಎಕರೆ ಭೂಮಿಯಲ್ಲಿ 9,932 ಎಕರೆ ಡಿನೋಟಿಫಿಕೇಷನ್ ಆದೇಶ ತಂದು ಭೂಮಿ ಹಂಚಿಕೆ ಮಾಡಬೇಕು''

-ನಾಗರಾಜ್ ಎಂ.ಡಿ. ಸಂತ್ರಸ್ತ

-----------------------------------------------

''ಶರಾವತಿ ಮುಳುಗಡೆ ಸಂತ್ರಸ್ತರಿಗೆ ಆದೇಶದ ಪ್ರಕಾರ ಹಂಚಿಕೆ ಮಾಡಿಲ್ಲ.ಅವತ್ತಿನ ಕಾಯ್ದೆ,ಕಾನೂನುಗಳ ಅವಶ್ಯಕತೆ ಇಲ್ಲ.ಆಗ ನೀಡಿದ ಭರವಸೆಗಳನ್ನು ಸರಕಾರ ಈಗ ಈಡೇರಿಸಬೇಕು.ಶರಾವತಿ ಮುಳುಗಡೆ ಸಂತ್ರಸ್ತರ ಕಣ್ಣೊರೆಸುವ ತಂತ್ರವನ್ನು ಎಲ್ಲ ರಾಜಕೀಯ ಪಕ್ಷಗಳು ಮಾಡಿವೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ ಹಾಕುತ್ತೇವೆ.''

- ಹೂವಪ್ಪಕೆ., ಅಧ್ಯಕ್ಷರು, ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ಸಂಘ(ರಿ)

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News