ನಾವು ಸತ್ತಿದ್ದೇವೆ ಅಂತ ಭಾವಿಸಿ ಬಿಟ್ಟು ಹೋದರು: ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ರಫೀಕ್-ರಮೀಝುದ್ದೀನ್

Update: 2022-10-21 15:31 GMT

ಕಡಬ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಬೆಡ್‌ಶೀಟ್ ಮಾರಾಟಗಾರರ ಮೇಲೆ ಗುಂಪೊಂದು ಬರ್ಬರವಾಗಿ ಹಲ್ಲೆ ನಡೆಸಿದ ಅಮಾನುಷ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿರುವುದಾಗಿ  ವರದಿಯಾಗಿದೆ.

ಮಾರಣಾಂತಿಕ ಹಲ್ಲೆಗೊಳಗಾದವರನ್ನು ಮಂಗಳೂರು ತಾಲೂಕಿನ ಅಡ್ಡೂರು ನಿವಾಸಿಗಳಾದ ಮುಹಮ್ಮದ್ ರಫೀಕ್ (32) ಹಾಗೂ ರಮೀಝುದ್ದೀನ್ (29) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯಿಂದ ದೂರು: ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ನಿವಾಸಿ ಕಿಟ್ಟ ಅಜಿಲ ಎಂಬವರ ಮನೆಗೆ ಬೆಡ್ ಶೀಟ್ ಮಾರಾಟದ ನೆಪದಲ್ಲಿ ಕಾರಿನಲ್ಲಿ ಆಗಮಿಸಿದ ರಫೀಕ್ ಹಾಗೂ ರಮೀಝುದ್ದೀನ್, ಕಿಟ್ಟರ ಪತ್ನಿ ವೀಣಾ ಎಂಬವರ ಜೊತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾರೆ ಎಂದು ವೀಣಾ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು: ಬರ್ಬರ ಹಲ್ಲೆ ನಡೆಸಿದ ಬಗ್ಗೆ ರಮೀಝುದ್ದೀನ್ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾನು ರಫೀಕ್‌ನೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ಕಡಬ ತಾಲೂಕಿನ ದೋಲ್ಪಾಡಿ ಪರಿಸರಕ್ಕೆ ಗುರುವಾರ ತೆರಳಿದ್ದೆ. ಈ ವೇಳೆ ಅಲ್ಲಿನ ಮನೆಯೊಂದರ ಮಹಿಳೆಯ ಜೊತೆಗೆ ತಕರಾರು ಉಂಟಾಗಿದ್ದು, ಹಿಂತಿರುಗಿ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೆದ್ರಾಜೆ ಎಂಬಲ್ಲಿ ಗುಂಪೊಂದು ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿಟ್ಟು ತಡೆದು ನಿಲ್ಲಿಸಿದೆ. ಅಲ್ಲದೆ ಕಾರಿನಿಂದ ನಮ್ಮನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಹಾಗೂ ಕಬ್ಬಿಣದ ರಾಡಿನಿದ ಹೊಡೆದು ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ ಕಾರನ್ನು ಧ್ವಂಸಗೈದಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಗುಂಪೊಂದು ಬರ್ಬರವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಘಟನೆಯ ಬಗ್ಗೆ ಕಡಬ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
 
‘ನಾವು ಸತ್ತಿದ್ದೇವೆ ಅಂತ ಭಾವಿಸಿ ಬಿಟ್ಟು ಹೋದರು’

ಮನೆ ಮನೆಗೆ ತೆರಳಿ ಬೆಡ್‌ಶೀಟ್ ಮಾರುತ್ತಿದ್ದ ನಮ್ಮನ್ನು ಸಂಘಪರಿವಾರದ ಗುಂಪೊಂದು ತಡೆದು ನಿಲ್ಲಿಸಿ ಸುತ್ತುವರಿದು ‘ಇದು ಹಿಂದೂಗಳ ಏರಿಯಾ. ಇಲ್ಲಿ ಬ್ಯಾರಿಗಳು ವ್ಯಾಪಾರ ಮಾಡುವಂತಿಲ್ಲ. ಯಾಕೆ ಈ ಕಡೆ ಬಂದಿದ್ದೀರಿ?’ ಎಂದು ಕೇಳುತ್ತಲೇ ದೊಣ್ಣೆ, ಮರದ ರೀಪು ಮತ್ತು ತಲವಾರಿನಿಂದ ಹಿಮ್ಮುಖವಾಗಿ ಹೊಡೆದರು. ಕೆಸರಲ್ಲಿ ಹಾಕಿ ಎಳೆದಾಡಿದರು. ನಮ್ಮ ಸಮೇತ ಕಾರಿಗೆ ಬೆಂಕಿ ಕೊಟ್ಟು ಕೊಂದು ಸುಟ್ಟುಹಾಕಲು ಯೋಜನೆ ರೂಪಿಸಿದರು. ಹಲ್ಲೆಗೊಳಗಾದ ನಮಗೆ ಎದ್ದು ನಿಲ್ಲಲೂ ಆಗುತ್ತಿರಲಿಲ್ಲ. ಕೊನೆಗೆ ನಾವು ಸತ್ತಿದ್ದೇವೆ ಅಂತ ಭಾವಿಸಿ ಅವರು ನಮ್ಮನ್ನು ಬಿಟ್ಟು ಹೋದರು’

ಇದು ಕಡಬ ತಾಲೂಕು ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಡ್ಡೂರಿನ ಮುಹಮ್ಮದ್ ರಫೀಕ್ ಮತ್ತು ರಮೀಝುದ್ದೀನ್ ಅವರ ಮಾತು.

‘ನಾವು ಹತ್ತಿರದ ಸಂಬಂಧಿಕರು. ಕಳೆದ 10-12 ವರ್ಷದಿಂದ ಜೊತೆಯಾಗಿ ಊರೂರು ಅಳೆದು, ಮನೆಗೆ ತೆರಳಿ ಬೆಡ್‌ಶೀಟ್ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ನಿನ್ನೆ ಕಡಬ ತಾಲೂಕಿನ ದೋಲ್ಪಾಡಿ ಮತ್ತು ಕಾಣಿಯೂರು ಗ್ರಾಮಕ್ಕೆ ಬೆಡ್‌ಶೀಟ್ ಮಾರಲು  ಹೋಗಿದ್ದೆವು. ದೋಲ್ಪಾಡಿ ಗ್ರಾಮದ ಮನೆಯೊಂದರ ಬಳಿ ತೆರಳಿ ಬೆಡ್‌ಶೀಟ್ ಖರೀದಿಸುವಂತೆ ಒತ್ತಾಯಿಸಿದೆವು. ಅವರು ಬೇಡ ಎಂದ ಬಳಿಕ ನಾವು ಅಲ್ಲಿಂದ ಮರಳಿದೆವು. ಸ್ವಲ್ಪ ಹೊತ್ತಿನಲ್ಲೇ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ನಮ್ಮ ಕಾರನ್ನು ಪಿಕ್‌ಅಪ್, ಬೈಕ್‌ಗಳಲ್ಲಿ ಬಂದ ಸಂಘಪರಿವಾರದ ಕಾರ್ಯಕರ್ತರು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ, ಮರದ ರೀಪು, ಕಬ್ಬಿಣದ ರಾಡಿನಿಂದ, ಕೈಯಿಂದ, ತಲವಾರಿನಿಂದ ಹೊಡೆದು, ಕಾಲಿನಿಂದ ತುಳಿದು, ತಲೆಗೂದಲು ಹಿಡಿದು, ರಸ್ತೆಯಲ್ಲಿ, ಕೆಸರಲ್ಲಿ ಎಳೆದಾಡಿದರು. ಅಲ್ಲದೆ ಕಾರನ್ನು ಜಖಂಗೊಳಿಸಿ ಸುಮಾರು 1.50 ಲಕ್ಷ ರೂ. ನಷ್ಟ ಮಾಡಿದರು. ಕಾರಿನಲ್ಲಿದ್ದ ಬೆಡ್‌ಶೀಟ್‌ಗಳನ್ನೂ ಬಿಸಾಡಿ ಸುಮಾರು 25,000 ರೂ.ನಷ್ಟವನ್ನುಂಟು ಮಾಡಿರುತ್ತಾರೆ ಎಂದು ದೂರಿದ್ದಾರೆ.

‘ಎಲ್ಲರೂ ಸೇರಿ ಸತತ 2 ಗಂಟೆ ಕಾಲ ಹೊಡೆಯುತ್ತಲೇ ಇದ್ದರು. ನಮ್ಮ ಮೇಲೆ ಬೈಕ್ ಚಲಾಯಿಸಿ ಕೊಲ್ಲಲು ಯತ್ನಿಸಿದರು. ನಮ್ಮನ್ನು ಕಾರಿನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚುವ ಬಗ್ಗೆ ಮಾತನಾಡಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಅಪಘಾತವಾಗಿರುವುದಾಗಿ ಕೇಸು ದಾಖಲಿಸಲು ಅವರಲ್ಲಿ ಒತ್ತಡ ಹಾಕಿದರು. ಕೊನೆಗೂ ಪ್ರಜ್ಞೆ ತಪ್ಪಿ ಬಿದ್ದ ನಮ್ಮನ್ನು ಸತ್ತಿರಬೇಕು ಎಂದು ಭಾವಿಸಿ ಬಿಟ್ಟು ಹೋದರು. ಪೊಲೀಸರು ನಮ್ಮನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಆದರೆ ನೋವು ತಡೆಯಲಾಗುತ್ತಿರಲಿಲ್ಲ. ಹಾಗಾಗಿ ರಾತ್ರಿ ಸುಮಾರು 12ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ನಮ್ಮನ್ನು ದಾಖಲಿಸಲಾಯಿತು. ನಮ್ಮ ದೇಹದ ಗಂಟುಗಂಟಲ್ಲಿ ಈಗಲೂ ನೋವಿದೆ. ಕೂರಲು, ನಡೆದಾಡಲು ಕಷ್ಟವಾಗುತ್ತಿದೆ ಎಂದು ರಫೀಕ್-ರಮೀಝುದ್ದೀನ್ ಅಳಲು ತೋಡಿಕೊಂಡರು.

"ಗುರುವಾರ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಘಟನೆಯ ಬಗ್ಗೆ ಎಲ್ಲಾ ಆಯಾಮ ಗಳಿಂದಲೂ ತನಿಖೆ ನಡೆಸಲಾಗುವುದು. ವೀಡಿಯೊವನ್ನೂ ಕೂಡ ಪರಿಶೀಲಿಸಲಾಗುವುದು. ಕಾನೂನು ಪ್ರಕಾರ ಸೂಕ್ತ ಕ್ರಮ ಜರಗಿಸಲಾಗುವುದು".

- ಸೋನಾವಣೆ ಋಷಿಕೇಶ್ ಭಗವಾನ್
ಪೊಲೀಸ್ ವರಿಷ್ಠಾಧಿಕಾರಿ, ದ.ಕ.ಜಿಲ್ಲೆ

ಗುಂಪು ಹಲ್ಲೆ ಖಂಡನೀಯ: ಎಸ್‌ ಬಿ ದಾರಿಮಿ

ಕಡಬ ತಾಲೂಕು ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ದುಷ್ಕರ್ಮಿಗಳ ಗುಂಪೊಂದು ಬಟ್ಟೆ ವ್ಯಾಪಾರಿಗಳಿಗೆ ಯದ್ವಾತದ್ವ ಹಲ್ಲೆ ನಡೆಸಿ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ವಿಕೃತ ಆನಂದ ಪಟ್ಟ ಘಟನೆ ಖಂಡನೀಯ ಎಂದು ಎಸ್ಕೆಎಸ್ಸೆಸ್ಸೆಫ್ ನಾಯಕ ಎಸ್‌ ಬಿ ದಾರಿಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳುವ ಇಂತಹ ಕೃತ್ಯಗಳಿಂದಾಗಿ ಪೋಲಿಸ್ ವ್ಯವಸ್ಥೆಯ ಬಗ್ಗೆ ಜನರು ನಂಬಿಕೆ ಕಳೆದುಕೊಂಡು ನಾಡಿನಲ್ಲಿ ಅರಾಜಕತೆ ಉಂಟಾಗಲು ಕಾರಣವಾಗುತ್ತದೆ. ಕಾನೂನು ಕೈಗೆತ್ತಿಕೊಂಡ ಯುವಕರ ವಿರುದ್ದ ರಾಜಕೀಯ ಪ್ರಭಾವಕ್ಕೊಳಗಾಗದೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಬಿ ದಾರಿಮಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News