×
Ad

ಗಾಣಿಗ ಗುರುಪೀಠಕ್ಕೆ 5 ಕೋಟಿ ರೂ. ಅನುದಾನ, ಜಮೀನು: ಸುಮೋಟೋ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್

Update: 2022-10-21 22:06 IST

ಬೆಂಗಳೂರು, ಅ.21: ಗಾಣಿಗ ಜನಾಂಗದ ಗುರುಪೀಠಕ್ಕೆ ನೀಡಿದ 5 ಕೋಟಿ ರೂಪಾಯಿ ಅನುದಾನ ಮತ್ತು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಗೆ 8 ಎಕರೆ ಜಮೀನು ಮಂಜೂರು ಮಾಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ಸ್ವಯಂಪ್ರೇರಿತ (ಸುಮೋಟೋ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತನೆ ಮಾಡಿಕೊಂಡಿರುವ ಹೈಕೋರ್ಟ್, ವಕೀಲೆ ವಿದ್ಯುಲ್ಲತಾ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ(ನ್ಯಾಯಾಲಯಕ್ಕೆ ನೆರವಾಗುವವರು) ನೇಮಕ ಮಾಡಿ ಆದೇಶಿಸಿದೆ.

ಎನ್. ಹನುಮೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿ ವಿಚಾರಣೆಯನ್ನು ಮುಂದೂಡಿದೆ. 

ಅಲ್ಲದೇ, ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಮುಂದಿನ ಎರಡು ವಾರಗಳಲ್ಲಿ ವಿದ್ಯುಲ್ಲತಾ ಅವರಿಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದೆ. 

ಪ್ರಕರಣವೇನು?: 2011ರ ಫೆಬ್ರುವರಿಯಲ್ಲಿ ಗಾಣಿಗ ಜನಾಂಗದ ಗುರುಪೀಠಕ್ಕೆ ಬಜೆಟ್‍ನಲ್ಲಿ 5 ಕೋಟಿ ಮೀಸಲು ಇರಿಸಲಾಗಿತ್ತು. ಅಂತೆಯೇ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ಸರ್ವೇ ನಂಬರ್ 112ರಲ್ಲಿ ಗೋಮಾಳದ ಎಂಟು ಎಕರೆ ಜಮೀನನ್ನು ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಹೆಸರಿಗೆ ನೋಂದಣಿ ಮಾಡಿಕೊಡಲಾಗಿದೆ.

ಈ ಟ್ರಸ್ಟ್ ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಬಿ.ಜೆ. ಪುಟ್ಟಸ್ವಾಮಿ ಅಧ್ಯಕ್ಷರಾಗಿದ್ದರು. ಇವರು ತಮ್ಮ ಅಧಿಕಾರ ಬಳಸಿ ಈ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. 

ಈ ನಡುವೆ ಅರ್ಜಿದಾರರಾದ ಹನುಮೇಗೌಡ ಗಾಣಿಗ ಟ್ರಸ್ಟ್ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಹಲವು ದೂರುಗಳನ್ನು ನೀಡಿದ್ದರು. ಅದರಿಂದ ಬಿ.ಜೆ. ಪುಟ್ಟಸ್ವಾಮಿ ಹನುಮೇಗೌಡ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಸಂಬಂಧ ವಿಚಾರಣಾ ನ್ಯಾಯಾಲಯವು ಹನುಮೇಗೌಡಗೆ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಈ ಎಲ್ಲ ವಿಚಾರಗಳನ್ನು ಅರ್ಜಿಯಲ್ಲಿ ಹನುಮೇಗೌಡ ಮುಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ 2020ರ ಮಾರ್ಚ್‍ನಲ್ಲಿ ಆತನಿಗೆ ಹೈಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News