×
Ad

ಪೆಗಾಸಸ್ ಗೆ ಬಳಕೆಯಾಗಿದ್ದ ಉಪಕರಣಕ್ಕೆ ಸೂಕ್ತ ಹಾರ್ಡ್ ವೇರ್ ಅನ್ನು ಐಬಿ ಖರೀದಿಸಿತ್ತು: ವರದಿ

Update: 2022-10-21 22:13 IST

ಹೊಸದಿಲ್ಲಿ,ಅ.21: ಗುಪ್ತಚರ ಸಂಸ್ಥೆ(Intelligence agency) (ಐಬಿ)ಯು ಇಸ್ರೇಲ್‌ ನ ಎನ್ಎಸ್ಒ ಗ್ರೂಪ್‌(NSO Group)ನ ಬೇಹುಗಾರಿಕೆ ಸಾಫ್ಟ್ ವೇರ್ ಪೆಗಾಸಸ್(Software Pegasus) ಅನ್ನು ನಿಯೋಜಿಸಲು ಇತರೆಡೆಗಳಲ್ಲಿ ಬಳಸಲಾಗಿದ್ದ ಉಪಕರಣದ ವಿವರಣೆಗಳಿಗೆ ತಾಳೆಯಾಗುವ ಹಾರ್ಡ್ ವೇರ್ ನ್ನು ಆ ಕಂಪನಿಯಿಂದ ಖರೀದಿಸಿತ್ತು ಎನ್ನುವುದನ್ನು ಆಮದು ದಾಖಲೆಗಳು ತೋರಿಸಿವೆ ಎಂದು ವರದಿಯಾಗಿದೆ.

ಇಸ್ರೇಲ್ ನೊಂದಿಗೆ ಪ್ರಮುಖ ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ ಭಾರತ ಸರಕಾರವು 2017ರಲ್ಲಿ ಪೆಗಾಸಸ್ ಸ್ಪೈ ವೇರ್ ಅನ್ನು ಖರೀದಿಸಿತ್ತು ಎಂದು ಈ ವರ್ಷದ ಆರಂಭದಲ್ಲಿ ನ್ಯೂಯಾರ್ಕ್ ಟೈಮ್ಸ್ ಮಾಡಿದ್ದ ವರದಿಗೆ ಈ ದಾಖಲೆಗಳು ಪುಷ್ಟಿ ನೀಡಿವೆ.
 ಕಣ್ಗಾವಲು ಸಾಫ್ಟ್ ವೇರ್ ನೊಂದಿಗೆ ಮೊಬೈಲ್ ಫೋನ್ ಗಳನ್ನು ರಹಸ್ಯವಾಗಿ ಆಕ್ರಮಿಸಿಕೊಳ್ಳುವ ಪೆಗಾಸಸ್ ಅನ್ನು ಹಲವಾರು ದೇಶಗಳಲ್ಲಿ ಬಳಸಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಪತ್ರಕರ್ತರು,ಸಾಮಾಜಿಕ ಕಾರ್ಯಕರ್ತರು,ಪ್ರತಿಪಕ್ಷ ರಾಜಕಾರಣಿಗಳು ಮತ್ತು ಭಿನ್ನಮತೀಯರ ವಿರುದ್ಧ ಬೇಹುಗಾರಿಕೆಗಾಗಿ ಈ ಸ್ಪೈವೇರ್ ಬಳಕೆಯಾಗಿದೆ.


 ಈ ಬೇಹುಗಾರಿಕೆ ಸಾಫ್ಟ್ ವೇರ್ ನ್ನು ಯಾರನ್ನು ಗುರಿಯಾಗಿಸಿಕೊಂಡು ಬಳಸಲಾಗಿತ್ತು ಎಂಬ ಕುರಿತು ನಡೆಸಲಾಗಿದ್ದ ಜಂಟಿ ತನಿಖೆ ‘ಪೆಗಾಸಸ್ ಪ್ರಾಜೆಕ್ಟ್’ ಕಳೆದ ವರ್ಷ ಪ್ರಮುಖ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅದರ ಸಂಭಾವ್ಯ ಸೋಂಕಿಗೆ ಗುರಿಯಾಗಿದ್ದ ಹಲವಾರು ಮೊಬೈಲ್ ಫೋನ್ ಸಂಖ್ಯೆಗಳನ್ನು ಬಹಿರಂಗಗೊಳಿಸಿತ್ತು.


  ತಾನು ಪೆಗಾಸಸ್ ಸಾಫ್ಟ್ ವೇರನ್ನು ಖರೀದಿಸಿದ್ದೆ ಎನ್ನುವುದನ್ನು ಭಾರತ ಸರಕಾರವು ದೃಢಪಡಿಸಿಲ್ಲ,ಅದನ್ನು ನಿರಾಕರಿಸಿಯೂ ಇಲ್ಲ. ಕಳೆದ ವರ್ಷದ ಜುಲೈನಲ್ಲಿ ವರದಿಗಳನ್ನು ತಳ್ಳಿಹಾಕಿದ್ದ ಮಾಹಿತಿ ತಂತ್ರಜ್ಞಾನ ಸಚಿವರು,ಇದು ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳಿಗೆ ಕಳಂಕ ತರುವ ಪ್ರಯತ್ನವಾಗಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News