ಬೇರೆಯವರ ಜೇಬಿಗೆ ಕೈ ಹಾಕಿ ಅಂತಸ್ತು ಕಟ್ಟುವುದು ಸರಿಯಲ್ಲ: ಸಂತೋಷ್ ಹೆಗ್ಡೆ

Update: 2022-10-21 16:46 GMT

ಬೆಂಗಳೂರು, ಅ.21: ಒಳ್ಳೆಯ ಕೆಲಸ ಮಾಡಿದವರಿಗೆ ಬೆಲೆ ಇಲ್ಲವೇ ಎನ್ನುವ ಆತಂಕ ಮೂಡುವ ಸಮಾಜದಲ್ಲಿ ನಾವು ಬದುಕುತ್ತಿದ್ದು, ಬೇರೆಯವರ ಜೇಬಿಗೆ ಕೈ ಹಾಕಿ ಅಂತಸ್ತು ಕಟ್ಟಿಕೊಳ್ಳುವುದು ಸರಿಯಲ್ಲ ಎಂದು ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಆಕ್ಷೇಪಿಸಿದ್ದಾರೆ. 

ಶುಕ್ರವಾರ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿ ಸೌಹಾರ್ದ ಇರಬೇಕು ಎಂದಾದರೆ ಸಮಾಜ ಬದಲಾಗಬೇಕು. ತಪ್ಪು ಮಾಡಿದವರಿಗೆ 30-40 ವರ್ಷಗಳ ಬಳಿಕ ಶಿಕ್ಷೆ ಆಗುತ್ತಿದೆ. ಹಾಗಾಗಿ ಇಂದು ಕಾನೂನಿಗೆ ಯಾರೂ ಹೆದರುವುದಿಲ್ಲ. ಸಮಾಜದಲ್ಲಿ ಮಾನವೀಯತೆ ಇದ್ದರೆ ಮಾತ್ರ ಮಾನವ ಎಂದು ಕರೆಸಿಕೊಳ್ಳಬಹುದು ಎಂದರು.

ಒಳ್ಳೆಯ ಕೆಲಸ ಮಾಡಿದವರಿಗೆ ಸನ್ಮಾನಿಸಿದಾಗ ಹುಮ್ಮಸ್ಸು ಬರುತ್ತದೆ. ಹಾಗೆಯೇ ಮುಂದೆ ಸಾಧನೆ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುವುದು ಎನ್ನುವ ವಿಶ್ವಾಸ ಉಂಟಾಗುತ್ತದೆ. ಸಮಾಜದಲ್ಲಿ ಅನ್ಯಾಯಗಳು ಆಗುತ್ತಿರುವುದಕ್ಕೆ ವ್ಯಕ್ತಿಗಳು ಕಾರಣವಲ್ಲ ಬದಲಾಗಿ ಈ ಸಮಾಜವೇ ಕಾರಣವಾಗಿರುತ್ತದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಚಾವುಂಡರಾಯ ದತ್ತಿ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಶಾಂತಿನಾಥ ದಿಬ್ಬದ, ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿ ಪ್ರಶಸ್ತಿಯನ್ನುಪತ್ರಕರ್ತ ಕೆ.ಎನ್.ಚನ್ನೇಗೌಡ ಅವರಿಗೆ, ಕನ್ನಡ ಕಾಯಕ ದತ್ತಿಪ್ರಶಸ್ತಿಯನ್ನು, ಸಹಾಯಕಪ್ರಾಧ್ಯಾಪಕ ಡಾ.ಶಂಕರಪ್ಪಮತ್ತು ರಂಗಭೂಮಿ ಕಲಾವಿದ ಕೆ.ಇಮಾಮ್ ಸಾಬ್ ಅವರಿಗೆ ದತ್ತಿಪ್ರಶಸ್ತಿಪ್ರದಾನಮಾಡಲಾಯಿತು.

‘ಕಸಾಪ ಮೇಲೆ ಜನರ ಸಂಪೂರ್ಣ ವಿಶ್ವಾಸ, ನಂಬಿಕೆ ಇದೆ ಎನ್ನುವುದಕ್ಕೆ ಸಾಕ್ಷಿ ಪರಿಷತ್ತಿನಲ್ಲಿ ಬರೋಬ್ಬರಿ 2061 ದತ್ತಿ ಪ್ರಶಸ್ತಿಗಳನ್ನು ಇಟ್ಟಿರುವುದು. ರಾಜ್ಯದ ಬೇರೆ ಯಾವ ಸಂಸ್ಥೆಗಳಲ್ಲಿಯೂ ಇಷ್ಟೊಂದು ದತ್ತಿಗಳನ್ನು ಇಟ್ಟಿರುವುದಿಲ್ಲ. ಗಮನಿಸ ಬೇಕಾದ ಸಂಗತಿ ಎಂದರೆ, ಇಲ್ಲಿ ಪ್ರಶಸ್ತಿಗಳನ್ನು ಪಡೆಯುವುದಕ್ಕೆ ಯಾರೂ ಅರ್ಜಿ ಹಾಕುವುದಿಲ್ಲ, ಯಾರ ಮರ್ಜಿಯನ್ನೂ ಕಾಯುವುದಿಲ್ಲ, ಸಾಧಕರನ್ನು ಗುರುತಿಸುತ್ತದೆಯೇ ಹೊರತು ಸಮಯ ಸಾಧಕರನ್ನಲ್ಲ'

-ಮಹೇಶ ಜೋಶಿ, ಕಸಾಪ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News