×
Ad

ಜನರ ಹೃದಯ ಗೆದ್ದ ಕಾರು ಚಾಲಕಿ: ಕಾರಣ ಏನು ಗೊತ್ತೇ ?

Update: 2022-10-22 07:22 IST

ಬೆಂಗಳೂರು: ಆ್ಯಪ್ ಆಧರಿತ ಕಾರು ಚಾಲಕಿಯೊಬ್ಬರು ಕರ್ತವ್ಯದಲ್ಲಿರುವ ವೇಳೆ ತಮ್ಮ ಪುಟ್ಟ ಮಗಳನ್ನು ಕೂಡಾ ಜತೆಗೆ ಕರೆದುಕೊಂಡು ಹೋಗುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಲೌಡ್‍ಸೆಕ್ (CloudSEK) ಸೈಬರ್ ಭದ್ರತಾ ಸ್ಟಾರ್ಟಪ್‍ನ ಸಹ ಸಂಸ್ಥಾಪಕ ಮತ್ತು ಸಿಇಓ ರಾಹುಲ್ ಶಶಿ (Rahul Sasi) ಈ ಸ್ವಾರಸ್ಯಕರ ಘಟನೆಯನ್ನು ಲಿಂಕ್ಡಿನ್‍ನಲ್ಲಿ ಬಣ್ಣಿಸಿದ್ದು, ವೈರಲ್ ಆಗಿದೆ.

"ನಿನ್ನೆ ನನ್ನ ಸ್ನೇಹಿತ ಉಬೆರ್‌ ನಲ್ಲಿ ಕಾರು ಬುಕ್ ಮಾಡಿದಾಗ, ಈ ಮಹಿಳೆ ನನ್ನನ್ನು ಕರೆದೊಯ್ಯಲು ಬಂದರು. ಕಾರು ಚಾಲನೆ ಮಾಡುತ್ತಿದ್ದಾಗ, ಪುಟ್ಟ ಮಗು ಮುಂದಿನ ಆಸನದಲ್ಲಿ ನಿದ್ರಿಸುತ್ತಿದ್ದುದು ಕಂಡುಬಂತು. ಇದು ನಿಮ್ಮ ಮಗಳೇ ಎಂದು ಕೇಳಲು ಹಿಂಜರಿಕೆ ಆಗಲಿಲ್ಲ" ಎಂದು ಪೋಸ್ಟ್‌ ನಲ್ಲಿ ವಿವರಿಸಿದ್ದಾರೆ. ನಂದಿನಿ ಎಂಬ ಈ ಚಾಲಕಿ ಕರ್ತವ್ಯದಲ್ಲಿರುವಾಗಲೇ ಮಗುವಿನ ಆರೈಕೆಯನ್ನೂ ಮಾಡುವುದಾಗಿ ಹೇಳಿದ್ದಾರೆ.

"ಉದ್ಯಮಿಯಾಗುವುದು ಆ ಮಹಿಳೆಯ ಕನಸಿನೊಂದಿಗೆ ತಮ್ಮ ಎಲ್ಲ ಉಳಿತಾಯವನ್ನು ವಿನಿಯೋಗಿಸಿ ಕೆಲ ವರ್ಷಗಳ ಹಿಂದೆ ಆಹಾರ ಪೂರೈಕೆ ಟ್ರಕ್ ಆರಂಭಿಸಿದ್ದರು. ಆದರೆ ಕೋವಿಡ್-19 ಕಾರಣದಿಂದ ನಷ್ಟವಾಗಿ ಹೂಡಿಕೆ ಮಾಡಿದ ಎಲ್ಲ ಹಣ ಕಳೆದುಕೊಂಡರು. ಆ ಬಳಿಕ ಉಬೆರ್‍ನಲ್ಲಿ ವಾಹನ ಚಾಲನೆ ಆರಂಭಿಸಿದರು. ದಿನಕ್ಕೆ 12 ಗಂಟೆ ದುಡಿಯುವ ಅವರು ಇನ್ನೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಲೂ ಸಿದ್ಧ ಎಂದು ಹೇಳಿದರು. ಉಳಿತಾಯ ಮಾಡಿ ಕಳೆದುಕೊಂಡ ಎಲ್ಲವನ್ನೂ ಮರು ನಿರ್ಮಾಣ ಮಾಡುವುದು ಆಕೆಯ ಕನಸು" ಎಂದು ರಾಹುಲ್ ವಿವರಿಸಿದ್ದಾರೆ.

ನಂದಿನಿ ಜತೆಗಿನ ಸೆಲ್ಫಿ ಶೇರ್ ಮಾಡಿರುವ ಅವರ ಪೋಸ್ಟ್‌ಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಅವರ ವ್ಯವಹಾರದಲ್ಲಿ ಹೂಡಿಕೆ ಮಾಡಲು ಹಲವು ಮಂದಿ ಮುಂದೆ ಬಂದಿದ್ದಾರೆ. ಆಕೆ ನಮಗೆ ಸ್ಫೂರ್ತಿ ಎಂದು ಮತ್ತೆ ಕೆಲವರು ಹೇಳಿದ್ದಾರೆ.

"ರಾಹುಲ್ ಶಶಿ ಅವರಿಗೆ ಧನ್ಯವಾದಗಳು. ನಮ್ಮ ತಂಡ ಆ ಚಾಲಕಿಯ ಸಂಪರ್ಕದಲ್ಲಿದೆ ಹಾಗೂ ಹೇಗೆ ಅವರಿಗೆ ಇನ್ನಷ್ಟು ಬೆಂಬಲ ನೀಡಬಹುದು ಎಂದು ನೋಡುತ್ತೇವೆ" ಎಂದು ಉಬೆರ್ ಇಂಡಿಯಾ ಆ್ಯಂಡ್ ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News