×
Ad

ಗೋವಾ CM ಬೆಂಗಳೂರಿನ ರಸ್ತೆಗಳನ್ನು ನೋಡಿದ್ದರೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದರೇನೋ?: ದಿನೇಶ್ ಗುಂಡೂರಾವ್

Update: 2022-10-22 10:06 IST
ಪ್ರಮೋದ್ ಸಾವಂತ್  |  ದಿನೇಶ್ ಗುಂಡೂರಾವ್

ಬೆಂಗಳೂರು: 'ರಾಜ್ಯದ ಹದಗೆಟ್ಟ ರಸ್ತೆಗಳ ಬಗ್ಗೆ ನೆರೆರಾಜ್ಯದವರೂ ಅಪಹಾಸ್ಯ ಮಾಡುವ ಹೀನಾಯ ಸ್ಥಿತಿಗೆ ತಲುಪಿದ್ದೇವೆ' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬೆಳಗಾವಿಯ ರಸ್ತೆಗಳ ಬಗ್ಗೆ ಬೊಮ್ಮಾಯಿಸರ್ಕಾರವನ್ನು ಛೇಡಿಸಿದ್ದಾರೆ. ಗೋವಾ CM ನೋಡಿರುವುದು ಕೇವಲ ಬೆಳಗಾವಿ ರಸ್ತೆಗಳನಷ್ಟೇ. ಅವರೇನಾದರೂ ಬೆಂಗಳೂರಿನ ರಸ್ತೆಗಳನ್ನು ನೋಡಿದ್ದರೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದರೇನೋ?'' ಎಂದು ರೆಸ್ತೆ ಗುಂಡಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ಯಮಸ್ವರೂಪಿ ಗುಂಡಿಗಳಿಂದ ಬೆಂಗಳೂರು ಸಾವಿನ ಮನೆಯಾಗಿದೆ. ಜನ ರಸ್ತೆಯಲ್ಲಿ ಓಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಗುಂಡಿಗಳ ಅಪಾಯದಿಂದ ಪಾರಾಗಿ ಸುರಕ್ಷಿತವಾಗಿ ತಲುಪಿದರೆ ಅವರೇ ಅದೃಷ್ಟವಂತರು. ರಸ್ತೆ ಗುಂಡಿ ಮುಚ್ಚದೆ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರಕ್ಕೆ ಏನನ್ನಬೇಕು?'' ಎಂದು ಕಿಡಿಕಾರಿದ್ದಾರೆ. 

''BBMP ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು ಕಳೆದ 5 ವರ್ಷದಲ್ಲಿ 20.060 ಕೋಟಿ ಖರ್ಚು ಮಾಡಿದ್ದೇವೆ ಎಂದು ಕಳೆದ ಅಧಿವೇಶನದಲ್ಲಿ ಬೊಮ್ಮಾಯಿ ಹೇಳಿದ್ದರು. ಹಾಗಾದರೆ ಆ ಹಣ ಎಲ್ಲಿ ಹೋಯಿತು? ಅದರಲ್ಲೂ 40% ಕಮೀಷನ್ ನುಂಗಲಾಯಿತೆ? 20 ಸಾವಿರ ಕೋಟಿ ಖರ್ಚು ಮಾಡಿದರೂ ರಸ್ತೆಗಳು ಅಧ್ವಾನವಾಗಿರುವ ಅರ್ಥವೇನು? ಸಾರ್ವಜನಿಕರ ಹಣಕ್ಕೆ ಬೆಲೆಯಿಲ್ಲವೇ?'' ಎಂದು ಪ್ರಶ್ನೆ  ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News