ಟೋಲ್ ವಿರುದ್ಧದ ಹೋರಾಟದ ಫೋಟೊ ಬಳಸಿ ಟ್ರೋಲ್ ಪ್ರಕರಣ; ನ್ಯಾಯ ದೊರೆಯುವ ಭರವಸೆ ಇದೆ: ಪ್ರತಿಭಾ ಕುಳಾಯಿ
ಮಂಗಳೂರು: ನಾನು ಈ ಭಾರತದ ಪ್ರಜೆ, ನನಗೆ ಈ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಆದರೆ ಬಿಜೆಪಿ ಸರಕಾರ ಹೆಣ್ಣು ಮಕ್ಕಳ ಪರವಾಗಿ ಇರುತ್ತದೆ ಎಂಬ ನಂಬಿಕೆ, ನಿರೀಕ್ಷೆ ಇಲ್ಲ. ಪೊಲೀಸ್ ಆಯುಕ್ತರು ದಿಟ್ಟ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ. ಅವರ ಜತೆ ಮಾತನಾಡಿದ್ದೇನೆ’’ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ವಿವಿಧ ಸಂಘಟನೆಗಳ ಮಹಿಳೆಯರ ಜತೆ ಇಂದು ಭೇಟಿ ಮಾಡಿ ಮಾನತಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತಾಡಿದರು.
ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯೇ ದೂರು ನೀಡಲಾಗಿದ್ದು, ಎಫ್‌ಐಆರ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಯಾವುದಾದರೂ ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಿ ತನ್ನ ಪ್ರತಿಕ್ರಿಯೆ ನೀಡಿದಾಗ, ಹೋರಾಟಕ್ಕಿಳಿದಾಗ ಆಕೆಯನ್ನು ಕೀಳಾಗಿ ಬರೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಆಕೆಯನ್ನು ಕುಗ್ಗಿಸಿ ಆಕೆ ಮತ್ತೆ ಸಾಮಾಜಿಕವಾಗಿ ಸಕ್ರಿಯವಾಗಿ ಇರದಂತೆ ತಡೆಯುವ ಪ್ರಯತ್ನ ಬಹಳಷ್ಟು ನಡೆಯುತ್ತಿದೆ. ಇಂತಹ ಪ್ರಕ್ರಿಯೆ ನಿಲ್ಲಬೇಕು. ಹೆಣ್ಣು ಮಕ್ಕಳಿಗೂ ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯುವ ಅವಕಾಶ ಇದೆ. ಈ ಹೋರಾಟ ಒಂದು ಹಂತಕ್ಕೆ ಬಂದು ತಲುಪಿದೆ ಎನ್ನುವ ಬಗ್ಗೆ ತೃಪ್ತಿ ಇದೆ ಎಂದು ಅವರು ಹೇಳಿದರು.
ನಿನ್ನೆ ಪತ್ರಿಕಾಗೋಷ್ಠಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಟ್ರೋಲ್‌ಗೆ ಹಾಕಲಾದ ಕಮೆಂಟ್‌ಗಳು ಡಿಲೀಟ್ ಆಗಿದೆ. ಕಿಡಿಗೇಡಿಗಳು ಮಹಿಳೆಯರನ್ನು ಟ್ರೋಲ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದವರು ತಮ್ಮ ಅಕೌಂಟ್‌ಗಳಿಂದ ಅಂತಹ ಪದಗಳನ್ನು ಡಿಲೀಟ್ ಮಾಡಿದ್ದಾರೆ. ವಿವಿಧ ಮಹಿಳಾ, ಸಾಮಾಜಿಕ ಸಂಘಟನೆಗಳು, ಟೋಲ್ ವಿರೋಧಿ ಹೋರಾಟಗಾರರು, ಸಮುದಾಯದವರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಪ್ರತಿಭಾ ಕುಳಾಯಿ ಹೇಳಿದರು.
ಆರೋಪಿಗಳು ಶೀಘ್ರವೇ ವಶಕ್ಕೆ ಪಡೆದು ವಿಚಾರಣೆ: ಶಶಿಕುಮಾರ್
"ಟೋಲ್ ವಿರುದ್ಧದ ಹೋರಾಟದ ಸಂದರ್ಭದ ಸಾಮಾಜಿಕ ಕಾರ್ಯಕರ್ತೆಯೊಬ್ಬರ ಫೋಟೋವನ್ನು ಬಳಸಿ ಅಶ್ಲೀಲ ಪದಗಳನ್ನು ಬರೆದು ಸಾಮಾಜಿಕ ಜಾಲತಾಣಗಳ ಮೂಲಕ ಮಾನಹಾನಿ ಮಾಡಿರುವ ದೂರಿನ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ಮಹಿಳೆಯ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯ ಮೂಲಕ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಶೀಘ್ರವೇ ವಶಕ್ಕೆ ಪಡೆಯಲು ಕ್ರಮ ವಹಿಸಲಾಗುವುದು. ಆರೋಪಿಗಳನ್ನು ಪತ್ತೆ ಮಾಡಲು ಈಗಾಗಲೇ ಎರಡು ತಂಡಗಳನ್ನು ಮಾಡಿ ಕ್ರಮ ವಹಿಸಲಾಗಿದೆ".
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.