ಉಡುಪಿಯಲ್ಲಿ ಕಣ್ಮನ ಸೆಳೆದ ಸಾಂಪ್ರದಾಯಿಕ ಗೂಡದೀಪ ಸ್ಪರ್ಧೆ
ಉಡುಪಿ, ಅ.23: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಹಭಾಗಿತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಾಲಕ ಬಾಲಕಿಯರಿಗೆ ‘ದೀಪಿಕಾ- 2022’ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆಯನ್ನು ಉಡುಪಿ ಬನ್ನಂಜೆ ಶ್ರೀನಾರಾಯಣಗುರು ಶಿವಗಿರಿ ಸಭಾ ಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ವಿವಿಧ ಧರ್ಮಗಳ ಹಬ್ಬವನ್ನು ಎಲ್ಲ ರಾಜಕೀಯ ಪಕ್ಷಗಳು ಒಟ್ಟು ಸೇರಿ ಆಚರಿಸಬೇಕು ಇದರಿಂದ ದೇಶದ ಪ್ರಜಾಪ್ರಭುತ್ವ, ಜಾತ್ಯ ತೀತೆ, ಸಂವಿಧಾನ ಇನ್ನಷ್ಟು ಬಲ ಗೊಂಡು ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ದೀಪಾವಳಿ ಹಬ್ಬವು ಸಾಮರಸ್ಯ, ಶಾಂತಿ ನೆಮ್ಮದಿಯನ್ನು ಈ ನಾಡಿಗೆ ತರು ವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ಯಾನಲಿಸ್ಟ್ ವರೋನಿಕಾ ಕರ್ನೆಲಿಯೋ, ಮುಖಂಡರಾದ ಅಮೃತ್ ಶೆಣೈ, ಪ್ರಸಾದ್‌ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿದರು.
ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಶಲ್ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ರೋಶನ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹಾಗೂ ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಮಾಧವ ಬನ್ನಂಜೆ ವಂದಿಸಿದರು.
ಅಕ್ಷಯ್- ಪ್ರಥಮ, ಅಂಶುಲಾ- ದ್ವಿತೀಯ
ಸ್ಪರ್ಧೆಯಲ್ಲಿ ಮಲ್ಪೆ ಸರಕಾರಿ ಪ್ರೌಢಶಾಲೆಯ ಅಕ್ಷಯ್ ಪ್ರಥಮ, ಪರ್ಕಳ ಬಿ.ಎಂ.ಸ್ಕೂಲ್‌ನ ಅಂಶುಲಾ ದ್ವೀತಿಯ ಹಾಗೂ ಪೆರಪಂಳ್ಳಿಯ ಉನ್ನತ್ ತೃತೀಯ ಬಹುಮಾನವನ್ನು ಪಡೆದುಕೊಂಡರು.
ವಿಜೇತರಿಗೆ ಪ್ರಥಮ 10,000 ರೂ., ದ್ವಿತೀಯ ೫೦೦೦ರೂ., ತೃತೀಯ ೩೦೦೦ರೂ. ಮತ್ತು ೧೦ ಪ್ರೋತ್ಸಾಹಕರ ಬಹುಮಾನಗಳನ್ನು ಹಾಗೂ ಭಾಗವಹಿಸಿ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಸ್ಪರ್ಧೆಯಲ್ಲಿ ೩೫೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು, ಬಿದಿರು, ತೆಂಗಿನ ಸೋಗೆ, ಬಣ್ಣದ ಪೇಪರ್, ಪೇಪರ್ ಕಪ್‌ಗಳಲ್ಲಿ ತಯಾರಿಸಿದ ವಿವಿಧ ಮಾದರಿ ಯ ಸಾಂಪ್ರದಾಯಿಕ ಗೂಡುದೀಪಗಳು ಕಣ್ಮನ ಸೆಳೆದವು.