ಬಿರುಸಾಗುತ್ತಿರುವ ಕಸರತ್ತು; ವಿಧಾನಸಭಾ ಚುನಾವಣೆ

Update: 2022-10-24 05:31 GMT

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ. ರಾಜಕೀಯ ಪಕ್ಷಗಳ ತಯಾರಿ ಜೋರಾಗಿಯೇ ಇದೆ. ಅದರಲ್ಲೂ ಆಡಳಿತ ಪಕ್ಷವಾದ ಬಿಜೆಪಿ ಸಾಧ್ಯವಾದ ಎಲ್ಲ ಕಸರತ್ತುಗಳಲ್ಲೂ ವರ್ಷದಿಂದಲೇ ತೊಡಗಿದೆ. ಗೆಲ್ಲುವ ದಾರಿಯನ್ನು ಹಲವು ದಿಕ್ಕಿನಿಂದ ಹುಡುಕಿಕೊಳ್ಳುತ್ತಿದೆ. ಇದರ ನಡುವೆಯೇ ಹಲವು ಗೊಂದಲಗಳೂ ಪಕ್ಷದೊಳಗಿವೆ. ನಾಯಕರ ನಡುವೆಯೇ ಭಿನ್ನಮತಗಳು ಒಂದೆಡೆಯಾದರೆ ಕಾಂಗ್ರೆಸ್ ತಂತ್ರಗಾರಿಕೆಯ ಕುರಿತ ಸಣ್ಣ ಭಯವೂ ಇನ್ನೊಂದೆಡೆ ಬಿಜೆಪಿಗೆ ಇದ್ದಂತಿದೆ.

ರಾಜ್ಯ ವಿಧಾನಸಭೆಗೆ 2023ರಲ್ಲಿ ಚುನಾವಣೆ. ಅಧಿಕಾರದಲ್ಲಿರುವ ಬಿಜೆಪಿಗೆ ಮತ್ತೆ ಅಧಿಕಾರ ಹಿಡಿಯುವುದು ಪ್ರತಿಷ್ಠೆಯ ಪ್ರಶ್ನೆ. ಈಗಾಗಲೇ ಅದು ಭಾರೀ ತಯಾರಿಯಲ್ಲಿಯೂ ತೊಡಗಿದೆ. ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡೇ ಅದರ ಇತ್ತೀಚಿನ ಹಲವು ನಡೆಗಳಿರುವುದನ್ನೂ ಗಮನಿಸಬಹುದು. ಬಿಜೆಪಿ ತಂತ್ರಗಳೇನು, ಆ ನಡುವೆಯೂ ಪಕ್ಷದೊಳಗಿನ ಗೊಂದಲ ಗಳೇನು, ಅದರ ಎದುರಿರುವ ಆತಂಕಗಳೇನು ಇವನ್ನೆಲ್ಲ ನೋಡುವ ಮೊದಲು, ಬಿಜೆಪಿ ನಾಯಕರ ಇತ್ತೀಚಿನ ಕೆಲವು ಮಾತುಗಳ ಕಡೆ ಸ್ವಲ್ಪ ಗಮನ ಕೊಡಬೇಕು. ಕಳೆದ ವಾರವಷ್ಟೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿಯ ಚುನಾವಣಾ ತಯಾರಿಯನ್ನು ಅಭೂತಪೂರ್ವ ಎಂದು ಬಣ್ಣಿಸಿದ್ದಾರೆ. ರಾಜ್ಯದಲ್ಲೀಗ ಇರುವುದು ಕಾಂಗ್ರೆಸ್ ಸೋಲಿನ ಮತ್ತು ಬಿಜೆಪಿ ಗೆಲುವಿನ ಅಲೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರದ ಮೂಲಕ ಅಭಿವೃದ್ಧಿಯಾಗಿದೆ ಎಂಬುದನ್ನು ಹೇಳುತ್ತ, 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅರುಣ್ ಸಿಂಗ್ ಮಾತುಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿಯೂ ಪ್ರಸ್ತಾವವಾಗಿದ್ದು, ಅವರು ಪಕ್ಷದ ನಾಯಕರೇ ಅಲ್ಲ ಎನ್ನುವಲ್ಲಿಯವರೆಗೂ ಹೇಳಿರುವ ಸಿಂಗ್, ಚುನಾವಣೆ ಹೊತ್ತಲ್ಲಿ ಪಕ್ಷದ ಮೇಲಾಗಬಹುದಾದ ಕೆಟ್ಟ ಪರಿಣಾಮಗಳನ್ನು ನಿವಾರಿಸಲು ಯತ್ನಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಬಾರದೆಂಬ ಯತ್ನಾಳ್ ಹೇಳಿಕೆ ಪಕ್ಷದ್ದಲ್ಲ, ಅದು ಅವರ ವೈಯಕ್ತಿಕ ಎನ್ನುವ ಮೂಲಕ ಯತ್ನಾಳ್‌ರಿಂದ ದೂರ ಕಾಯ್ದುಕೊಂಡಿದ್ದಾರೆ. ಅವರ ಸ್ವಭಾವವೇ ಹಾಗೆ, ಅವರ ಮಾತುಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಅವರಿಗೆ ನೋಟಿಸ್ ಕೂಡ ನೀಡಿದ್ದೇವೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ನಮ್ಮದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸರಕಾರವಾಗಿದ್ದು, ಎಲ್ಲರ ಅಭಿವೃದ್ಧಿ ಧ್ಯೇಯವಾಗಿದೆ ಎಂದು ಹೇಳುವುದರೊಂದಿಗೆ, ಯತ್ನಾಳ್ ಹೇಳಿಕೆಯ ತೀವ್ರತೆ ಇಲ್ಲವಾಗಿಸಲು ಪ್ರಯತ್ನಿಸಿರುವ ಅರುಣ್ ಸಿಂಗ್, 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿನ ಆರೋಪವನ್ನೂ ಮಸುಕಾಗಿಸುವ ಮಾತುಗಳನ್ನು ಹೇಳಿರುವುದು, ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ಮಾಡಿರುವುದು ಕೂಡ ಗಮನೀಯ.

ಕಾಂಗ್ರೆಸ್ ಜೋಡೊ ಯಾತ್ರೆಯನ್ನು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಜೋಡಿಸೋ ಯಾತ್ರೆ ಎಂದು ಅರುಣ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಮಾರ್ಗದರ್ಶನ ದಲ್ಲಿ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿರುವುದನ್ನು ಕೂಡ ಪ್ರಸ್ತಾವಿಸಲು ಅವರು ಮರೆತಿಲ್ಲ. ಯಡಿಯೂರಪ್ಪನವರನ್ನು ಕೊಂಡಾಡಿ ಮಾತನಾಡಿರುವ ಸಿಂಗ್, ಯಡಿಯೂರಪ್ಪನವರನ್ನು ಪಕ್ಷ ನಿರ್ಲಕ್ಷಿಸುತ್ತಿಲ್ಲ. ರಾಜ್ಯದ ಬಹಳ ದೊಡ್ಡ ಮತ್ತು ಜನಪ್ರಿಯ ನಾಯಕ ರಾಗಿರುವ ಅವರು ವಿಜಯ ಸಂಕಲ್ಪ ಯಾತ್ರೆಗೆ ಹೋಗುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಸೈಡ್ಲೈನ್ ಮಾಡಿಲ್ಲ ಎಂಬ ಸ್ಪಷ್ಟನೆಯೂ ಅರುಣ್ ಸಿಂಗ್ ಕಡೆಯಿಂದ ಬಂದಿದೆ. ಸಚಿವ ಕಾರಜೋಳ ಅವರು ಪಕ್ಷಕ್ಕೆ ಮಾರ್ಗದರ್ಶಕರು ಎಂದು ಸಿಂಗ್ ಹೇಳಿರುವಲ್ಲೂ ಚತುರತೆ ಇದೆ. ಒಟ್ಟಾರೆ ಉತ್ತರ ಕರ್ನಾಟಕ ಭೇಟಿಯ ಸಂದರ್ಭದಲ್ಲಿನ ಅರುಣ್ ಸಿಂಗ್ ಮಾತುಗಳು ಪಕ್ಷದಲ್ಲಿ ಒಗ್ಗಟ್ಟು ಇದೆಯೆಂಬುದನ್ನು ಬಿಂಬಿಸುವ ನಿಟ್ಟಿನಲ್ಲಿದ್ದುದು ಸ್ಪಷ್ಟ. ಪಕ್ಷದೊಳಗೆ ಸ್ವಲ್ಪ ಗೊಂದಲಗಳಿರುವುದನ್ನು ಒಪ್ಪಿರುವ ಸಿಂಗ್, ಅದೇನಿದ್ದರೂ ಭಿನ್ನಾಭಿಪ್ರಾಯವೇ ಹೊರತು ಗುಂಪುಗಾರಿಕೆಯಲ್ಲ. ಬಿಜೆಪಿಯೊಳಗೆ ಯಾವ ಗುಂಪುಗಾರಿಕೆಯೂ ಇಲ್ಲ ಎಂದು ಹೇಳಿದ್ದು, ಗುಂಪುಗಾರಿಕೆಯೇನಿದ್ದರೂ ಕಾಂಗ್ರೆಸ್‌ನಲ್ಲಿ ಎಂದು ಚುಚ್ಚಿದ್ದಾರೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯವಿಲ್ಲ, ಭಿನ್ನಾಭಿಪ್ರಾಯವಿದ್ದರೂ ಮನಸ್ಸಿನಿಂದ ಯಾವ ಭೇದಭಾವವೂ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಯತ್ನಾಳ್ ವಿಚಾರವಾಗಿ ತಾವು ಖಾರವಾಗಿ ಮಾತನಾಡಿದ್ದನ್ನು ಮರೆಸುವಂತೆ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಸ್ಪಂದಿಸುವ ಸುಳಿವು ಕೊಡುವ ಹಾಗೆಯೂ ಹೇಳಿಕೆ ನೀಡಿದ್ದಾರೆ. ಪಂಚಮಸಾಲಿ ಸಮುದಾಯದ ಮೂವರು ದೊಡ್ಡ ನಾಯಕರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಶಂಕರ ಗೌಡ ಪಾಟೀಲ್ ಮುನೇನಕೊಪ್ಪ ಸಚಿವ ಸ್ಥಾನದಲ್ಲಿದ್ದಾರೆ. ಎಲ್ಲರೂ ಕೂತು ಮೀಸಲಾತಿ ವಿಚಾರದಲ್ಲಿ ತೀರ್ಮಾನಕ್ಕೆ ಬರುತ್ತೇವೆ ಎಂದು ಆ ಸಮುದಾಯವನ್ನು ಒಲಿಸಿಕೊಳ್ಳುವ ನಿಟ್ಟಿನ ಮಾತನ್ನು ಅರುಣ್ ಸಿಂಗ್ ಆಡಿದ್ದಾರೆ.ಅರುಣ್ ಸಿಂಗ್ ಮಾತುಗಳಲ್ಲಿ ಪ್ರಸ್ತಾವವಾಗಿರುವ ಇನ್ನೂ ಎರಡು ಮುಖ್ಯವಾದ ವಿಚಾರಗಳೆಂದರೆ, ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಹಾಗೂ ಸಚಿವ ಸಂಪುಟ ವಿಸ್ತರಣೆ. ಹೌದು, ಈಗಾಗಲೇ ರಾಜ್ಯ ಸರಕಾರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದೂ ಸೇರಿದಂತೆ ನಾಗಮೋಹನ್ ದಾಸ್ ಅವರ ವರದಿಯಲ್ಲಿರುವ ಮುಖ್ಯಾಂಶಗಳನ್ನು ಒಪ್ಪಿಕೊಳ್ಳುವ ತೀರ್ಮಾನ ತೆಗೆದುಕೊಂಡಿದೆ. ಪರಿಶಿಷ್ಟ ಜಾತಿಗೆ ಶೇ.2ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.4ರಷ್ಟು ಹೆಚ್ಚಿಗೆ ಮೀಸಲಾತಿಯನ್ನು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆಗೆ ಅನುಗುಣವಾಗಿ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಕೊಡುವ ವಿಚಾರದಲ್ಲಿ ಸರಕಾರ ನಿರ್ಣಯ ಕೈಗೊಂಡಿದೆ. ಈ ವಿಚಾರವನ್ನೇ ಪ್ರಸ್ತಾವಿಸಿ ಅರುಣ್ ಸಿಂಗ್, ಮೀಸಲಾತಿಯನ್ನು ಬಿಜೆಪಿ ಬೆಂಬಲಿಸುತ್ತದೆ. ಕಾಂಗ್ರೆಸ್ ಎಂದಿಗೂ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಲಿಲ್ಲ ಎನ್ನುವ ಮೂಲಕ, ಮೀಸಲಾತಿ ಹೆಚ್ಚಳ ಕುರಿತ ನಿರ್ಣಯವನ್ನು ಚುನಾವಣೆ ಮುಂದಿರುವಾಗ ನೆನಪಿಸಿದ್ದಾರೆ.

ಬಿಜೆಪಿ ಪಾಲಿಗೆ ಇಷ್ಟೇ ಮಹತ್ವದ್ದಾಗಬಲ್ಲ ಇನ್ನೊಂದು ಸಂಗತಿ, ಚುನಾವಣೆ ಹತ್ತಿರ ಇರುವಾಗ ಸಂಪುಟ ವಿಸ್ತರಣೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುವುದೆಂಬ ಸುಳಿವು ಅರುಣ್ ಸಿಂಗ್ ಮಾತುಗಳಲ್ಲಿ ಸಿಕ್ಕಿದೆ. ಸಂಪುಟದಲ್ಲಿ ಐದು ಸ್ಥಾನಗಳು ಖಾಲಿಯಿದ್ದು, ಚುನಾವಣೆಗೆ ಹೋಗುವ ಮುನ್ನ ಈ ಸ್ಥಾನಗಳನ್ನು ತುಂಬಿಕೊಂಡು ಅದರ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರ ಬಿಜೆಪಿ ಎದುರು ಇದೆ. ಸಂಪುಟ ವಿಸ್ತರಣೆ ಎಂದೊಡನೆ ಮೊದಲು ನೆನಪಿಗೆ ಬರುವ ಎರಡು ಹೆಸರುಗಳೆಂದರೆ, ಸ್ಥಾನ ಕಳೆದುಕೊಂಡಿರುವ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ. ತಾವು ಸಚಿವ ಸ್ಥಾನಾಕಾಂಕ್ಷಿ ಎಂದು ಹೇಳುತ್ತ ಈಶ್ವರಪ್ಪ ಎದುರು ನೋಡುತ್ತಿದ್ದರೆ, ಜಾರಕಿಹೊಳಿಗೂ ಹುದ್ದೆ ಮರಳಿ ಸಿಗುವ ಸಾಧ್ಯತೆ ಇಲ್ಲದೆ ಇಲ್ಲ. ಸ್ವತಃ ಅರುಣ್ ಸಿಂಗ್ ಅವರೇ ರಮೇಶ್ ಜಾರಕಿಹೊಳಿ ಹೆಸರು ತೆಗೆದುಕೊಂಡು ಮಾತಾಡಿದ್ದಾರೆ. ರಮೇಶ್ ಜಾರಕಿಹೊಳಿ ತಮ್ಮ ಸ್ನೇಹಿತರೆಂದೂ ಅವರೊಂದಿಗೆ ಚರ್ಚೆ ನಡೆಸಿರುವುದಾಗಿಯೂ ಅರುಣ್ ಸಿಂಗ್ ಹೇಳಿದ್ದಾರೆ. ಈ ನಡುವೆ ಯಡಿಯೂರಪ್ಪ ದಿಲ್ಲಿ ಭೇಟಿ ಕೂಡ ಮಹತ್ವದ ಬೆಳವಣಿಗೆಯಾಗಿದ್ದು, ಸಂಪುಟ ವಿಸ್ತರಣೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಬಗ್ಗೆ ಊಹಾಪೋಹಗಳೆದ್ದಿದ್ದು ನಿಜ. ಈ ವಿಚಾರವನ್ನು ಹೈಕಮಾಂಡ್ ಯಡಿಯೂರಪ್ಪ ಜೊತೆ ಚರ್ಚಿಸಿದರೆ ಅಚ್ಚರಿಯೇನಿಲ್ಲ. ಇದೆಲ್ಲ ಒಂದೆಡೆಯಾದರೆ, ಯತ್ನಾಳ್ ಬಾಂಬ್ ಬಿಜೆಪಿ ಪಾಲಿನ ಮಗ್ಗುಲ ಮುಳ್ಳು ಎಂಬಂತೆ ನಿರಂತರವಾಗಿದೆ. ಇತ್ತೀಚೆಗೆ ಯತ್ನಾಳ್ ಆಡಿದ್ದ ಮತ್ತೊಂದು ಮಾತು ಯಡಿಯೂರಪ್ಪ ಮತ್ತು ಬೊಮ್ಮಾಯಿ ಇಬ್ಬರನ್ನೂ ಕೆಣಕುವಂತಿತ್ತು. ಅವರಿಬ್ಬರೂ ಒಟ್ಟಾಗಿ ವಿಜಯ ಸಂಕಲ್ಪ ಯಾತ್ರೆ ಮಾಡಿದರೆ ಬಿಜೆಪಿ ಸೋಲಲಿದೆ ಎಂದು ಯತ್ನಾಳ್ ವ್ಯಂಗ್ಯ ವಾಡಿದ್ದರು. ಇದಕ್ಕೂ ಮೊದಲು ಅವರು ಮುಸ್ಲಿಮ್ ಮತಗಳು ತಮಗೆ ಅಗತ್ಯವಿಲ್ಲ ಎಂಬ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದರು. ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರನ್ನು ಸಿಎಂ ಧಮ್ ಇದ್ದರೆ ಎನ್‌ಕೌಂಟರ್ ಮಾಡಲಿ ಎಂದು ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದರು. ಇನ್ನೊಂದೆಡೆ ಯಡಿಯೂರಪ್ಪ ಮೇಲೆ ಎಫ್‌ಐಆರ್ ವಿಚಾರ ಪ್ರಸ್ತಾವಿಸಿ, ರಾಜಾಹುಲಿ ಆದರೇನು, ಮೊದಲು ರಾಜೀನಾಮೆ ಕೊಡಲಿ ಎಂದಿದ್ದರು. ಎರಡು ತಿಂಗಳ ಹಿಂದೆ ಮಾತನಾಡಿದ್ದ ಯತ್ನಾಳ್, ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ತಮಗೆ ಎಲ್ಲಾ ಅರ್ಹತೆಗಳೂ ಇವೆ. ನನ್ನ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಬಿಜೆಪಿ ಅತ್ಯಂತ ಸುಲಭವಾಗಿ 150 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರು. ಸಿಎಂ ಸ್ಥಾನಕ್ಕಾಗಿ ಕೇಂದ್ರದ ನಾಯಕರೇ ದೊಡ್ಡ ಮೊತ್ತದ ಹಣ ಕೇಳಿದ್ದರು ಎಂದೂ ಒಮ್ಮೆ ಯತ್ನಾಳ್ ಹೇಳಿದ್ದಿತ್ತು. ಹೀಗೆ ಪಕ್ಷದೊಳಗೇ ತೀವ್ರ ಟೀಕಾಕಾರರಾಗಿರುವ ಯತ್ನಾಳ್ ವಿಚಾರದಲ್ಲಿ ಬಿಜೆಪಿಗೆ ಸದಾ ಆತಂಕ. ಇದರ ಪರಿಣಾಮವಾಗಿಯೇ ಯತ್ನಾಳ್ ಬಗ್ಗೆ ಅರುಣ್ ಸಿಂಗ್ ಕಟುವಾಗಿ ಮಾತನಾಡಿದ್ದು. ಆದರೆ ಅರುಣ್ ಸಿಂಗ್ ಮಾತಿಗೆ ತೀವ್ರ ಪ್ರತ್ಯುತ್ತರ ಬಂದಿರುವುದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯಿಂದ. ಯತ್ನಾಳ್ ಯಾರೆಂಬುದು ಇಡೀ ರಾಜ್ಯಕ್ಕೆ ಗೊತ್ತು. ಯತ್ನಾಳ್ ಪಕ್ಷದ ನಾಯಕರಲ್ಲ ಎಂದಿರುವುದು ಸಮುದಾಯಕ್ಕೆ ನೋವು ತಂದಿದೆ. ಯತ್ನಾಳ್ ವಿಚಾರವಾಗಿ ಹಗುರವಾಗಿ ಮಾತನಾಡ ಬಾರದು ಎಂದಿದ್ದಾರೆ ಅವರು. ಯಡಿಯೂರಪ್ಪ ವಿರುದ್ಧ, ಅವರ ಪುತ್ರನ ವಿರುದ್ಧ ಯತ್ನಾಳ್ ಟೀಕೆಗಳು ಮತ್ತೆ ಮತ್ತೆ ಸುದ್ದಿಯಾಗುತ್ತವೆ. ಕುಟುಂಬ ರಾಜಕಾರಣಕ್ಕೆ ಅವಕಾಶವಿರಕೂಡದೆಂಬ ಮಾತುಗಳನ್ನೂ ಯತ್ನಾಳ್ ಹೇಳುವುದು ಯಡಿಯೂರಪ್ಪನವರನ್ನು ಗುರಿಯಾಗಿಸಿಕೊಂಡೇ. ಹಾಗೆಂದು ಯಡಿಯೂರಪ್ಪ ಅವರ ಆಸೆ ಆಕಾಂಕ್ಷೆಗಳೇನೂ ಮಂಕಾಗಿಲ್ಲ. ಅವರುತಮ್ಮ ಪುತ್ರ ವಿಜಯೇಂದ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಗೆದ್ದೇ ಗೆಲ್ಲುತ್ತಾರೆ ಎಂಬ ಮಾತುಗಳನ್ನು ಮರಳಿ ಮರಳಿ ಆಡುತ್ತಲೇ ಇದ್ದಾರೆ. ವಿಜಯೇಂದ್ರ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ, ಈ ಮಧ್ಯೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಡಿಎ ವಸತಿ ಯೋಜನೆಗಳನ್ನು ಗುತ್ತಿಗೆ ನೀಡಲು ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪೆನಿಯಿಂದ ಕೋಟ್ಯಂತರ ರೂ. ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದ ಮೇರೆಗೆ ದಾಖಲಾಗಿರುವ ಎಫ್‌ಐಆರ್ ಇದು. ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧವೂ ಇದೇ ಪ್ರಕರಣದಲ್ಲಿ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದೆ. ಇಂಥ ಅನೇಕ ಸಂಗತಿಗಳ ಹಿನ್ನೆಲೆಯಲ್ಲಿ ಹಲವು ಗೊಂದಲಗಳು ಬಿಜೆಪಿಯ ಎದುರು ಇವೆ. ಮತೀಯ ಹೇಳಿಕೆಗಳನ್ನು ನೀಡುವ ವಿಚಾರದಲ್ಲಿ ಯತ್ನಾಳ್ ಮಾತ್ರವಲ್ಲ, ಈಶ್ವರಪ್ಪ ಮೊದಲಾದ ಬಿಜೆಪಿ ನಾಯಕರು ಸದಾ ಮುಂದು. ಗೃಹಸಚಿವ ಸ್ಥಾನದಲ್ಲಿರುವ ಆರಗ ಜ್ಞಾನೇಂದ್ರ ಕೂಡ ಇಂಥ ಹೇಳಿಕೆಗಳನ್ನು ನೀಡಿ ಟೀಕೆಗೊಳಗಾಗಿದ್ದಾರೆ.

ಬೆಂಗಳೂರಿನ ಗೋರಿಪಾಳ್ಯದಲ್ಲಿನ ಯುವಕನ ಕೊಲೆ ಆತನಿಗೆ ಉರ್ದು ಬರಲಿಲ್ಲ ಎಂಬ ಕಾರಣಕ್ಕೆ ಆದದ್ದು ಎಂಬ ವಿವಾದಾತ್ಮಕ ಹಾಗೂ ಆಧಾರರಹಿತ ಹೇಳಿಕೆಯನ್ನು ತಾವೊಬ್ಬ ಗೃಹ ಸಚಿವರೆಂಬು ದನ್ನೂ ಮರೆತು ಅವರು ಕೊಟ್ಟಿದ್ದರು. ಬಿಜೆಪಿಯ ಸೂತ್ರಧಾರ ಸಂಸ್ಥೆಯಾದ ಆರೆಸ್ಸೆಸ್ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕೂಡ ಎರಡು ದಿನಗಳ ಹಿಂದೆ ಇಂಥದೇ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮತಾಂತರ ಹಾಗೂ ಬಾಂಗ್ಲಾ ಅಕ್ರಮ ವಲಸಿಗರಿಂದಲೇ ಜನಸಂಖ್ಯೆಯ ಅಸಮತೋಲನ ಉಂಟಾಗುತ್ತಿದೆ ಎಂಬ ಅವರ ಹೇಳಿಕೆ ತೀವ್ರ ಟೀಕೆಗೂ ಒಳಗಾಗಿದೆ. ದೇಶದಲ್ಲಿ ಅವ್ಯಾಹತವಾಗಿ ಮತಾಂತರ ನಡೆಯುತ್ತಿದೆ. ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನು ಬೇಕು. ಎಲ್ಲ ಧರ್ಮದವರಿಗೂ ಅನ್ವಯವಾಗುವ ರೀತಿಯಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಯಾಗಬೇಕು ಎಂಬ ಹೊಸಬಾಳೆ ಮಾತುಗಳು ಯಾರ ಓಲೈಕೆಗಾಗಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 2016ರಲ್ಲಿ ರಚನೆ ಯಾಗಿದ್ದ ಎಸಿಬಿಯನ್ನು ರದ್ದುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶ ವನ್ನು ಕೂಡ ಈ ಮಧ್ಯೆ ಬಿಜೆಪಿ ಸರಕಾರ ಅನುಷ್ಠಾನಕ್ಕೆ ತಂದಿದೆ. ಲೋಕಾಯುಕ್ತಕ್ಕೆ ಎಲ್ಲ ಪ್ರಕರಣಗಳೂ ವರ್ಗಾವಣೆಯಾಗಿವೆ. ಈ ಬೆಳವಣಿಗೆ ಕೂಡ ಮುಂದಿನ ಚುನಾವಣೆಯ ಹೊತ್ತಿನಲ್ಲಿ ಒಂದು ಮಹತ್ವದ ಅಂಶವಾಗುವ ಸಾಧ್ಯತೆ ಇಲ್ಲದಿಲ್ಲ.

ಇದೆಲ್ಲದರ ಮಧ್ಯೆಯೇ ಸಮುದಾಯ ಓಲೈಕೆ ನಿಟ್ಟಿನಲ್ಲಿ ಬಿಜೆಪಿಯಕಸರತ್ತು ಮುಂದುವರಿದೇ ಇದೆ. ಅರುಣ್ ಸಿಂಗ್ ಹೇಳಿಕೆಗಳಲ್ಲಿ ಉದ್ದಕ್ಕೂ ಅದು ಕಂಡುದು ಒಂದೆಡೆಯಾದರೆ, ಮತ್ತೊಂದೆಡೆಯಿಂದ ತನ್ನ ಕಾರ್ಯತಂತ್ರದ ಒಂದು ಭಾಗವಾದ ಪ್ರತಿಮೆ ರಾಜಕಾರಣವನ್ನು ರಾಜ್ಯದಲ್ಲೂ ಬಿಜೆಪಿ ಬಿಟ್ಟಿಲ್ಲ. ಇದರ ಭಾಗವಾಗಿಯೇ ಅದು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿಲ್ಲಿಸಿ ರುವುದು. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅದನ್ನು ಅನಾವರಣಗೊಳಿಸಲಿದ್ದಾರೆ ಎಂದು ಹೇಳಲಾಗಿದೆ. 85 ಕೋಟಿ ರೂ. ವೆಚ್ಚದ 220 ಟನ್ ತೂಕದ ಪ್ರತಿಮೆ ಇದಾಗಿದೆ. ಗುಜರಾತ್‌ನ ಸ್ಟ್ಯಾಚ್ಯು ಆಫ್ ಯೂನಿಟಿ ವಿನ್ಯಾಸಗೊಳಿಸಿದ್ದ ಶಿಲ್ಪಿ ರಾಮ್ ವಂಜಿ ಸುತಾರ್ ಅವರೇ ಈ ಪ್ರತಿಮೆಯನ್ನೂ ವಿನ್ಯಾಸಗೊಳಿಸಿದ್ದಾರೆ. ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ಕಟ್ಟಲು ರಾಜ್ಯದೆಲ್ಲೆಡೆ ಯಿಂದ ಪವಿತ್ರ ಮಣ್ಣು ಸಂಗ್ರಹದ ಅಭಿಯಾನಕ್ಕೂ ಬಿಜೆಪಿ ಮುಂದಾಗಿದೆ. ನಾಡಪ್ರಭು ಕೆಂಪೇಗೌಡ ಎಂಬ ಹೆಸರಿನಲ್ಲಿ ಸಿದ್ಧಗೊಳ್ಳುವ ವಾಹನಗಳು ಮಣ್ಣು ಸಂಗ್ರಹದಲ್ಲಿ ತೊಡಗಲಿವೆ. ಲಿಂಗಾಯತ ಸಮುದಾಯದ ಬಳಿಕ, ರಾಜ್ಯದ ಎರಡನೇ ಅತಿ ದೊಡ್ಡ ಸಮುದಾಯ ಒಕ್ಕಲಿಗರು. ಬಿಜೆಪಿ ಪಾಲಿಗೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಮಟ್ಟದ ಮತಗಳ ಮೂಲವೂ ಆಗಲಿದೆ ಈ ಸಮುದಾಯ. ಒಕ್ಕಲಿಗರನ್ನು ಓಲೈಸುವ ತಂತ್ರದ ಭಾಗವಾಗಿಯೇ ಈಗ ಕೆಂಪೇಗೌಡ ಪ್ರತಿಮೆ ನಿಲ್ಲಿಸುತ್ತಿರುವುದು. ಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸ ಲೇ ಬೇಕೆಂದು ಬಿಜೆಪಿ ಎಲ್ಲ ತಂತ್ರ ರೂಪಿಸುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಬಾದಾಮಿಯಲ್ಲಿ ಅವರು ಸ್ಪರ್ಧಿಸಿದರೆ ಮತ್ತೆ ಶ್ರೀರಾಮುಲು ಅವರನ್ನೇ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸುವುದು, ಒಂದು ವೇಳೆ ವರುಣಾಕ್ಕೆ ಬಂದರೆ ಅಲ್ಲಿ ವಿಜಯೇಂದ್ರ ಅವರನ್ನು ಪ್ರತಿಸ್ಪರ್ಧಿ ಯಾಗಿಸುವ ನಿಟ್ಟಿನಲ್ಲಿ ಬಿಜೆಪಿ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ರಾಜ್ಯ ಬಿಜೆಪಿಯೆದುರು ಇರುವ ಮತ್ತೊಂದು ಮುಖ್ಯ ತಂತ್ರವೆಂದರೆ ಉತ್ತರ ಭಾರತದ ಮಾದರಿ. ಕಳಂಕಿತರು, ಭ್ರಷ್ಟರು, ಗೆಲ್ಲಲಾರದಂಥ ವರು, ಕುಟುಂಬ ರಾಜಕಾರಣದಲ್ಲಿ ತೊಡಗಿ ರುವವರು ಇಂಥವ ರನ್ನೆಲ್ಲ ಮುಂದಿನ ಚುನಾವಣೆಯಿಂದ ದೂರವಿಡುವ ರಹಸ್ಯ ಕಾರ್ಯತಂತ್ರವೊಂದು ನಡೆದಿದೆ ಎಂದೂ ಹೇಳಲಾಗುತ್ತಿದೆ. ಬಿ.ಎಲ್. ಸಂತೋಷ್ ಅವರು ನಿಷ್ಠರ ಜೊತೆಗೆ ಈ ದಿಸೆಯಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆಂಬ ವರದಿಗಳೂ ಇವೆ. ಒಂದು ವೇಳೆ ಇದು ನಿಜವಾದಲ್ಲಿ ಹಲವರಿಗೆ ಟಿಕೆಟ್ ಸಿಗದಂತಾಗಿ ಅಚ್ಚರಿಯ ಆಯ್ಕೆಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಹಳಬರ ಜೊತೆ ಹೊಸಬರಿಗೂ ಆದ್ಯತೆ ನೀಡುವ ಯೋಚನೆ ಕೂಡ ಬಿಜೆಪಿಗಿರುವುದು ನಿಜ. ಇದು ಕೂಡ ಉತ್ತರ ಪ್ರದೇಶದ್ದೇ ಮಾದರಿ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 40 ಕ್ಷೇತ್ರಗಳಲ್ಲಿ ಹೊಸಬರಿಗೆ ಆದ್ಯತೆ ನೀಡುವ ಚಿಂತನೆ ಪಕ್ಷದೊಳಗೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಒಳಗಾಗಿದೆ. ಅವರ ಅವಧಿಯಲ್ಲಿ ಅಭಿವೃದ್ಧಿ ವಿಷಯದಲ್ಲೂ ಬಿಜೆಪಿಗೆ ಹೇಳಿಕೊಳ್ಳುವಂತಹ ಸಾಧನೆಗಳಿಲ್ಲ. ಒಂದರ ಹಿಂದೊಂದು ವಿವಾದ ಗಳು ಹಾಗೂ ಅವುಗಳನ್ನು ಅವರು ನಿಭಾಯಿಸಿದ ರೀತಿ ಬಗ್ಗೆ ವ್ಯಾಪಕ ಅಸಮಾಧಾನ ಇದೆ. ಮತದಾರರು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವಧಿಯನ್ನು ಹೋಲಿಸಿ ನೋಡಿದರೆ ಅಲ್ಲಿ ಬಿಜೆಪಿಗೆ ಮೈನಸ್ ಪಾಯಿಂಟ್ ಜಾಸ್ತಿ. ಅದನ್ನು ಮುಂದಿನ ಕೆಲವು ತಿಂಗಳು ಗಳಲ್ಲಿ ಬೊಮ್ಮಾಯಿ ಹೇಗೆ ಸುಧಾರಿಸಿ ಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದೆಲ್ಲದರ ನಡುವೆ, ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದಾರೆ. ಖರ್ಗೆ ವರ್ಚಸ್ಸು ವಿಧಾನಸಭಾ ಚುನಾವಣೆಯಲ್ಲಿ ನಡೆದರೂ, ರಾಜ್ಯ ಬಿಜೆಪಿ ಪಾಲಿಗೆ ಇದು ಅಂಥ ತೊಡಕಿನ ಸಂಗತಿಯೇನೂ ಆಗಲಿಕ್ಕಿಲ್ಲ. ಹಾಗಿದ್ದೂ ಈ ಬೆಳವಣಿಗೆ ಹಾಗೂ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಭಾರತ್ ಜೋಡೊ ಯಾತ್ರೆ ಸಣ್ಣ ಮಟ್ಟಿಗಾದರೂ ಬಿಜೆಪಿಯೊಳಗೆ ಒಂದು ಕಂಪನ ಮೂಡಿಸಿರಲೂಬಹುದು.

Full View

Writer - ಆರ್. ಜೀವಿ

contributor

Editor - ಆರ್. ಜೀವಿ

contributor

Similar News