ಎಲ್ಲ ಆರೋಪಿಗಳನ್ನು ಬಂಧಿಸದಿರುವುದು ಪೊಲೀಸ್ ಇಲಾಖೆಯ ವೈಫಲ್ಯ: ಜೆ.ಆರ್.ಲೋಬೊ
ಮಂಗಳೂರು, ಅ.24: ಕಡಬ ತಾಲೂಕಿನ ಕಾಣಿಯೂರಿನಲ್ಲಿ ಯುವಕರಿಬ್ಬರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯ ಎಲ್ಲ ಆರೋಪಿಗಳನ್ನು ಬಂಧಿಸದೆ ಇರುವುದು ಪೊಲೀಸ್ ಇಲಾಖೆಯ ವೈಫಲ್ಯ. ಕೂಡಲೆ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಣಾಂತಿಕ ಹಲ್ಲೆಗೀಡಾದ ಯುವಕರು ತಪ್ಪು ಮಾಡಿದ್ದರೆ ಅದಕ್ಕೆ ಪೊಲೀಸ್ ವ್ಯವಸ್ಥೆ ಇದೆ. ಆದರೆ ಸಾಯುವ ಸ್ಥಿತಿಯವರೆಗೆ ಹೊಡೆಯುತ್ತಾರೆ ಎಂದರೆ ಪೊಲೀಸ್ ವ್ಯವಸ್ಥೆ ಯಾಕೆ ಎಂದು ಪ್ರಶ್ನಿಸಿದರು
ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಹೋರಾಟ ನಡೆಸಿದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರನ್ನು ಅವಾಚ್ಯವಾಗಿ ನಿಂದಿಸಿ ಟ್ರೋಲ್ ಮಾಡಿರುವ ಆರೋಪಿಯ ಮೇಲೆ ಯಾಕೆ ಇನ್ನೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಜೆ.ಆರ್. ಲೋಬೊ, ಇತ್ತೀಚೆಗೆ ಚೀತಾ ಸೀಮಂತದ ಕಾರ್ಟೂನ್ ಪೋಸ್ಟ್ ಮಾಡಿರುವ ಪ್ರಕರಣದಲ್ಲಿ ರಾತ್ರೋರಾತ್ರಿ ಪೊಲೀಸರಿಗೆ ಬಂಧಿಸಲು ಸಾಧ್ಯವಾಗುವುದಾದರೆ ಪ್ರತಿಭಾ ಕುಳಾಯಿ ಪ್ರಕರಣದಲ್ಲಿ ಆರೋಪಿಗಳ ಬಂಧನ ವಿಳಂಬ ಮಾಡುತ್ತಿರುವುದು ಯಾವ ನ್ಯಾಯ ಎಂದರು.
ಸಮಾಜದಲ್ಲಿ ನಡೆಯುತ್ತಿರುವ ಇಂತಹ ಕುಕೃತ್ಯಗಳಿಗೆ ರಾಜಕೀಯ ನಾಯಕರ ದ್ವೇಷ ಭಾಷಣಗಳೇ ಪ್ರಚೋದನೆ. ಮೊದಲು ಇಂಥ ದ್ವೇಷ ಭಾಷಣ ಮಾಡುವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಪೊಲೀಸ್ ಇಲಾಖೆಯು ರಾಜಕಾರಣಿಗಳೊಂದಿಗೆ 'ಅಡ್ಜಸ್ಟ್ಮೆಂಟ್' ಮಾಡಿಕೊಂಡು ಕೆಲಸ ಮಾಡುತ್ತಿದೆ. ಪೊಲೀಸ್ ವ್ಯವಸ್ಥೆ ಸಂವಿಧಾನ, ಐಪಿಸಿ ಸೆಕ್ಷನ್‌ಗಳ ಪ್ರಕಾರ ಕೆಲಸ ಮಾಡಿ ಜನಸಾಮಾನ್ಯರಿಗೆ ರಕ್ಷಣೆ ನೀಡಲಿ. ಯಾವ ರಾಜಕಾರಣಿಗಳಿಗೂ ಮಣಿಯುವ ಅಗತ್ಯವಿಲ್ಲ. ರಾಜಕೀಯಪ್ರೇರಿತವಾಗಿ ಪೊಲೀಸರು ಕೆಲಸ ಮಾಡಿದರೆ ನಮಗೂ ಬೇರೆ ದಾರಿಯಿಲ್ಲದೆ ಬೀದಿಗಿಳಿಯಬೇಕಾಗುತ್ತದೆ ಎಂದು ಜೆ.ಆರ್. ಲೋಬೊ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ನೀರಜ್‌ಪಾಲ್, ಶಾಂತಲಾ ಗಟ್ಟಿ, ಅಪ್ಪಿ, ಚಂದ್ರಕಲಾ, ಮಲ್ಲಿಕಾ ಪಕ್ಕಳ, ಶಬೀರ್ ಮತ್ತಿತರರಿದ್ದರು.