ಸಿಐಟಿಯು ರಾಜ್ಯ ಸಮ್ಮೇಳನದ ಪ್ರಚಾರ ಜಾಥಾ ಸಮಾರೋಪ
ಉಡುಪಿ, ಅ.24: ಕಾರ್ಮಿಕರ ಹಾಗೂ ಜನ ಸಾಮಾನ್ಯರ ಬದುಕು ರಕ್ಷಿಸಲು ಸಿಐಟಿಯು ಸಂಘಟನೆ ಕಟಿಬದ್ಧವಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಸಿಐಟಿಯು ೧೫ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸಂಚರಿಸಿದ ಪ್ರಚಾರ ವಾಹನ ಜಾಥಾ ಶನಿವಾರ ಮಣಿಪಾಲ ದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳೂ ಹಾಗೂ ಜನಸಾಮಾನ್ಯರ ಮೇಲೆ ಹೇರಲಾಗುತ್ತಿರುವ ಬೆಲೆ ಏರಿಕೆಗಳು, ದೇಶದ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರೀಯೆಗೆ ನ.೧೫-೧೭ರಂದು ನಡೆಯುವ ಸಿಐಟಿಯು ರಾಜ್ಯ ಸಮ್ಮೇಳನ ಚರ್ಚಿಸಿ ಮುಂದಿನ ಹೋರಾಟಕ್ಕೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಸಮಾರೋಪದಲ್ಲಿ ಸಿಐಟಿಯು ಮುಖಂಡರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ ವಿ., ಬಲ್ಕೀಸ್, ಮೋಹನ್, ಶಶಿಧರ ಗೊಲ್ಲ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್ ಕೋಣಿ, ಶೀಲಾವತಿ, ಶ್ರೀಧರ ನಾಡ ಮೊದಲಾದವರು ಉಪಸ್ಥಿತರಿದ್ದರು.