ಬೆಂಗಳೂರು | ಪಟಾಕಿ ಅವಘಡ: 11 ಮಂದಿಗೆ ಗಾಯ
ಬೆಂಗಳೂರು, ಅ.24: ದೀಪಾವಳಿ ಸಂಭ್ರಮದ ಜೊತೆಯಲ್ಲಿ ಪಟಾಕಿ ಅವಘಡಗಳು ಪ್ರತಿ ವರ್ಷದಂತೆ ನಗರದಲ್ಲಿ ಮುಂದುವರಿದಿದ್ದು, 11 ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿನ ರಾಜಾಜಿನಗರದ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಪಟಾಕಿ ಅವಘಡದಿಂದ ಬಳಲುತ್ತಿದ್ದ 7 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಮೂವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ನಾರಾಯಣ ನೇತ್ರಾಲಯ ಆಸ್ಪತ್ರೆಯ ಡಾ.ಭುಜಂಗಶೆಟ್ಟಿ ಮಾಹಿತಿ ನೀಡಿದ್ದಾರೆ.
ಅದೇ ರೀತಿ, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಮುಖವಾಗಿ 15 ವರ್ಷದ ಬಾಲಕನ ಮುಖ ಸುಟ್ಟು ಹೋಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಬನಿರ್ಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಇದೇ ರೀತಿ, ಪಟಾಕಿ ಅವಘಡದಿಂದಾಗಿ ಥಣಿಸಂದ್ರದ 7 ವರ್ಷದ ಬಾಲಕನ ಎಡಗಣ್ಣಿಗೆ ಹಾಗೂ ಫ್ರೇಜರ್‍ಟೌನ್‍ನ 7 ವರ್ಷದ ಬಾಲಕನ ಬಲಗಣ್ಣಿಗೆ ಹಾನಿಯಾಗಿದೆ. ಸದ್ಯ ಬಾಲಕರ ಕಣ್ಣಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.